ಮಧ್ಯಪ್ರದೇಶದಲ್ಲಿ ವೀರ್ ದಾಸ್‌ಗೆ ಪ್ರದರ್ಶನ ನೀಡಲು ಬಿಡುವುದಿಲ್ಲ: ಗೃಹ ಸಚಿವ ನರೋತ್ತಮ್ ಮಿಶ್ರಾ

Update: 2021-11-18 09:19 GMT
Photo: Times of india

ಭೋಪಾಲ್ : ನಾನು ಎರಡು ಭಾರತದಿಂದ ಬಂದಿದ್ದೇನೆ ಎಂಬ ಮಾತಿಗೆ ಪೊಲೀಸ್ ದೂರುಗಳನ್ನು ಎದುರಿಸುತ್ತಿರುವ ಹಾಸ್ಯ ಕಲಾವಿದ ವೀರ್ ದಾಸ್ ಅವರಿಗೆ ರಾಜ್ಯದಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡುವುದಿಲ್ಲ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಗುರುವಾರ ಹೇಳಿದ್ದಾರೆ.

ಇದೀಗ ಅಮೆರಿಕದಲ್ಲಿರುವ ದಾಸ್ ಅವರು ಸೋಮವಾರ ಯೂಟ್ಯೂಬ್‌ನಲ್ಲಿ "ನಾನು ಎರಡು ಭಾರತದಿಂದ ಬಂದಿದ್ದೇನೆ" ಎಂಬ ಶೀರ್ಷಿಕೆಯ ಆರು ನಿಮಿಷಗಳ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಇದು ವಾಷಿಂಗ್ಟನ್ ಡಿಸಿಯ ಜಾನ್ ಎಫ್ ಕೆನಡಿ ಸೆಂಟರ್‌ನಲ್ಲಿ ಅವರ ಇತ್ತೀಚಿನ ಪ್ರದರ್ಶನದ ಭಾಗವಾಗಿತ್ತು.

ಮುಂಬೈ ಮೂಲದ ದಾಸ್, ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ ರೈತರ ಪ್ರತಿಭಟನೆಗಳು, ಕೋವಿಡ್-19 ವಿರುದ್ಧದ ಯುದ್ಧ, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದಮನ ಸೇರಿದಂತೆ ವಿವಿಧ ವಿಷಯಗಳನ್ನು ಸ್ಪರ್ಶಿಸಿದ್ದಾರೆ.

‘’ಅಂತಹ ಹಾಸ್ಯ ನಟರಿಗೆ ಪ್ರದರ್ಶನ ನೀಡಲು ನಾವು ಅನುಮತಿಸುವುದಿಲ್ಲ. ಅವರು ಕ್ಷಮೆಯಾಚಿಸಿದರೆ ನಾವು ಅದರ ಬಗ್ಗೆ ಯೋಚಿಸಲಿದ್ದೇವೆ ”ಎಂದು ಮಧ್ಯಪ್ರದೇಶ ಸರಕಾರದ ವಕ್ತಾರರೂ ಆಗಿರುವ ಮಿಶ್ರಾ ಅವರು ಪಿಟಿಐಗೆ ತಿಳಿಸಿದರು.

ತಮ್ಮ ಹೇಳಿಕೆಗಳು ದೇಶವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿಕೆ ನೀಡಿರುವ ದಾಸ್ ಅವರಿಗೆ  ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹಾಗೂ ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಹಾಗೂ  ಶಶಿ ತರೂರ್ ಬೆಂಬಲ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News