ಗುರುಗ್ರಾಮ: ನಮಾಝ್‌ ನಿರ್ವಹಿಸಲು ಸ್ಥಳಾವಕಾಶ ನೀಡಲು ಮುಂದೆ ಬಂದ ಗುರುದ್ವಾರ ಸಮಿತಿ

Update: 2021-11-18 10:23 GMT

ಗುರುಗ್ರಾಮ:  ಗುರುಗ್ರಾಮದಲ್ಲಿ ಶುಕ್ರವಾರದ ನಮಾಝ್ ಅನ್ನು ನಿಗದಿತ ಸಾರ್ವಜನಿಕ ಸ್ಥಳಗಳಲ್ಲಿ ಸಲ್ಲಿಸುವುದಕ್ಕೆ ಹಿಂದು ಸಂಘಟನೆಗಳು ಹಾಗೂ ಕೆಲ ಸ್ಥಳೀಯರ ಸತತ ವಿರೋಧದ ನಡುವೆ  ಗುರುಗ್ರಾಮದ ಗುರುದ್ವಾರ ಸಮಿತಿಯೊಂದು ಗುರುದ್ವಾರದ ಸ್ಥಳಗಳನ್ನು ನಮಾಜ್ ಸಲ್ಲಿಕೆಗೆ ನೀಡಲು ಮುಂದೆ ಬಂದಿದೆ.

ಗುರುಗ್ರಾಮದ ಸಬ್ಝಿ ಮಂಡಿಯಲ್ಲಿರುವ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಮುಖ್ಯಸ್ಥರಾಗಿರುವ ಶೇರ್ದಿಲ್ ಸಿಂಗ್ ಸಿದ್ದು ಅವರು ಮಾತನಾಡಿ, ಸದರ್ ಬಜಾರ್, ಸೆಕ್ಟರ್ 39, ಸೆಕ್ಟರ್ 46, ಮಾಡೆಲ್ ಟೌನ್ ಮತ್ತು  ಜಕೋಬಪುರದಲ್ಲಿರುವ ಐದು ಗುರುದ್ವಾರಗಳು  ತಮ್ಮ ಸ್ಥಳಗಳನ್ನು ನಮಾಝ್ ಸಲ್ಲಿಕೆಗೆ ಒದಗಿಸಲು ಮುಂದೆ ಬಂದಿವೆ ಎಂದರು.

"ಗುರುದ್ವಾರವು ಗುರುವಿನ ನಿವಾಸ. ಇಲ್ಲಿ ಎಲ್ಲಾ ಸಮುದಾಯದ ಜನರಿಗೆ ಸ್ವಾಗತವಿದೆ ಹಾಗೂ ಎಲ್ಲರೂ ಪ್ರಾರ್ಥನೆ ಸಲ್ಲಿಸಬಹುದು. ಮುಸ್ಲಿಂ ಸಮುದಾಯದ ಮಂದಿ ನಿಗದಿತ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಸಮಸ್ಯೆ ಎದುರಿಸುತ್ತಿದ್ದರೆ ಅವರು ಗುರುದ್ವಾರದಲ್ಲಿ ತಮ್ಮ ಪ್ರಾರ್ಥನೆ ಸಲ್ಲಿಸಬಹುದು" ಎಂದು ಸಿದ್ದು ಹೇಳಿದರು.

ಶುಕ್ರವಾರ ನವೆಂಬರ್ 19ರಂದು ಸಿಖರ ಪ್ರಥಮ ಗುರು ಆಗಿರುವ ಗುರು ನಾನಕ್ ಅವರ ಜಯಂತಿಯಾಗಿರುವ ಹಿನ್ನೆಲೆಯಲ್ಲಿ  ಗುರುದ್ವಾರ ಸಮಿತಿಯ ನಿರ್ಧಾರ ಮಹತ್ವ ಪಡೆದಿದೆ.

ಕಟ್ಟಡದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ ಕೋವಿಡ್ ಮಾರ್ಗಸೂಚಿಯಾನುಸಾರ 30- 40 ಜನರ ಗುಂಪುಗಳಲ್ಲಿ ಪಾರ್ಥನೆ  ಸಲ್ಲಿಸಬಹುದು, ಎಂದು ಸಮಿತಿ ಹೇಳಿದೆ.

 ಜಮೀಯತ್ ಉಲಮ ಸದಸ್ಯರು ಸಮಿತಿಯ ಮುಖ್ಯಸ್ಥರನ್ನು ಭೇಟಿಯಾಗಿ ಅವರ ಕೊಡುಗೆಯನ್ನು ಸ್ವೀಕರಿಸಿದ್ದು ಸೆಕ್ಟರ್ 39 ಹಾಗೂ ಸದರ್ ಬಜಾರ್‍ನಲ್ಲಿನ ಗುರುದ್ವಾರಗಳಲ್ಲಿ ನಮಾಝ್ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News