ಸಿಬಿಎಸ್ಇ-ಸಿಐಎಸ್ ಸಿಇಯ 10, 12ನೇ ತರಗತಿ ಪರೀಕ್ಷೆ ಆನ್ಲೈನ್ ನಲ್ಲಿ ನಡೆಸಲು ಕೋರಿದ ಮನವಿ ತಿರಸ್ಕರಿಸಿದ ಸುಪ್ರೀಂ

Update: 2021-11-18 15:58 GMT

ಹೊಸದಿಲ್ಲಿ, ನ. 17: ಸಿಬಿಎಸ್ಇ-ಐಸಿಎಸ್ಇಯ 10ನೇ ಹಾಗೂ 12ನೇ ತರಗತಿ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕ ನಡೆಸುವಂತೆ ಕೋರಿ 10ನೇ ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಸಿಬಿಎಸ್ಇ ಹಾಗೂ ಸಿಐಎಸ್ಇಯ 6 ವಿದ್ಯಾರ್ಥಿಗಳು ಈ ಮನವಿ ಸಲ್ಲಿಸಿದ್ದರು. ‌

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ಕುರಿತು ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ, ಕೋವಿಡ್ ಸಾಂಕ್ರಾಮಿಕ ರೋಗ ಈಗಲೂ ಇದೆ. ಆದುದರಿಂದ ಭೌತಿಕ ಮಾದರಿಯಲ್ಲಿ ಪರೀಕ್ಷೆ ನಡೆಸುವುದು ಸುರಕ್ಷಿತವಲ್ಲ ಎಂದು ಹೇಳಿದರು. ಪ್ರತಿವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎಸ್.ಜಿ. ತುಷಾರ್ ಮೆಹ್ತಾ, ‘‘ಕಳೆದ ವರ್ಷ ಆನ್‌ಲೈನ್ ಪರೀಕ್ಷೆ ನಡೆಸಿಲ್ಲ. ಆಗ 10ನೇ ತರಗತಿಯ 14 ಲಕ್ಷ ವಿದ್ಯಾರ್ಥಿಗಳು ಹಾಗೂ 12ನೇ ತರಗತಿಯ 20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು’’ ಎಂದರು. 

ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ 40 ವಿದ್ಯಾರ್ಥಿಗಳು ಕುಳಿತುಕೊಳ್ಳುವ ತರಗತಿಯಲ್ಲಿ ಕೇವಲ 12 ವಿದ್ಯಾರ್ಥಿಗಳು ಮಾತ್ರ ಕುಳಿತುಕೊಳ್ಳಬೇಕಾಗುತ್ತದೆ. ಆದುದರಿಂದ 15 ಸಾವಿರ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಪರೀಕ್ಷೆಯ ಅವಧಿಯನ್ನು 3 ಗಂಟೆಯಿಂದ 90 ನಿಮಿಷಕ್ಕೆ ಇಳಿಸಲಾಗಿದೆ ಎಂದು ಅವರು ಹೇಳಿದರು. ಪರೀಕ್ಷೆ ಪ್ರಕ್ರಿಯೆಗೆ ಯಾವುದೇ ಅಡಚಣೆ ಉಂಟಾಗದಂತೆ, ನಾವು ಹೆಚ್ಚು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು. 

ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ಪರೀಕ್ಷೆ ನಡೆಯುತ್ತಿದೆ. ನಾವು ಪ್ರಾಯೋಗಿಕವಾಗಿರೋಣ ಎಂದು ಹೇಳಿತು. ಈಗ ಆನ್‌ಲೈನ್ ಪರೀಕ್ಷೆ ನಡೆಸುವುದು ಹೇಗೆ ಎಂದು ಪ್ರಶ್ನಿಸಿತು. ನ್ಯಾಯವಾದಿ ಸಂಜಯ್ ಹೆಗ್ಡೆ, ಭಾಷೆಗಳು, ಗಣಿತ ಹಾಗೂ ವಿಜ್ಞಾನದಂತಹ ಪ್ರಮುಖ ವಿಷಯಗಳ ಪರೀಕ್ಷೆಗಳಿಗೆ ಹೆಚ್ಚು ವಿದ್ಯಾರ್ಥಿಗಳು ಇರುತ್ತಾರೆ. ಆದುದರಿಂದ ಈಗ ಕಡಿಮೆ ವಿದ್ಯಾರ್ಥಿಗಳು ಇರುವ ವಿಷಯಗಳ ಪರೀಕ್ಷೆಗಳನ್ನು ಮಾತ್ರ ನಡೆಸಿ. ಆನ್ಲೈನ್ ಮಾದರಿಯ ಪರೀಕ್ಷೆಯನ್ನು ಕೋರಿರುವ ವಿದ್ಯಾರ್ಥಿಗಳಿಗೆ ದಯವಿಟ್ಟು ಅವಕಾಶ ನೀಡಿ ಎಂದರು. ‘‘ಈಗ ಅವರು ಆನ್ಲೈನ್ ಪರೀಕ್ಷೆ ಬರೆಯು ವ್ಯವಸ್ಥೆಯನ್ನು ಅಳವಡಿಸಬೇಕಾಗಿದೆ. ಇದು ತುಂಬಾ ವಿಳಂಬವಾಯಿತು. ಪರೀಕ್ಷೆಯ ವೇಳಾಪಟ್ಟಿ ಬದಲಾಯಿಸಲು ಸಾಧ್ಯವಿಲ್ಲ’’ ಎಂದು ಸುಪ್ರೀಂ ಕೋರ್ಟ್ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News