ಪಾಕಿಸ್ತಾನ: ಅತ್ಯಾಚಾರ ಅಪರಾಧಿಗಳ ಪುರುಷತ್ವ ಹರಣ ಶಿಕ್ಷೆಗೆ ಸಂಸತ್ತು ಅನುಮೋದನೆ‌

Update: 2021-11-18 16:21 GMT

ಇಸ್ಲಮಾಬಾದ್, ನ.18: ಅತ್ಯಾಚಾರ ನಡೆಸುವ ಚಟ ಹೊಂದಿದವರು ಹಾಗೂ ಅತ್ಯಾಚಾರ ನಡೆಸಿದ ಹಲವು ಅಪರಾಧ ಸಾಬೀತಾದವರಿಗೆ ಪುರುಷತ್ವ ಹರಣ ಶಿಕ್ಷೆ ನೀಡುವ ನೂತನ ಕಾಯ್ದೆಗೆ ಪಾಕಿಸ್ತಾನದ ಸಂಸತ್ತು ಅನುಮೋದನೆ ನೀಡಿದೆ.

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ಮತ್ತು ವಿಚಾರಣೆಯನ್ನು ತ್ವರಿತಗೊಳಿಸಲು ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಪ್ರಸ್ತಾವನೆಗೂ ಸಂಸತ್ತು ಅನುಮೋದಿಸಿದೆ ಎಂದು ‘ದಿ ಡಾನ್’ ಪತ್ರಿಕೆ ವರದಿ ಮಾಡಿದೆ.

ಅಪರಾಧಿಗಳಲ್ಲಿ ಟೆಸ್ಟೋಸ್ಟೆರಾನ್(ಪುರುಷರಲ್ಲಿ ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ಪ್ರಧಾನ ಹಾರ್ಮೋನ್) ಅಂಶವನ್ನು ಕಡಿಮೆ ಮಾಡುವ ಮೂಲಕ ಪುರುಷತ್ವ ಹರಣ ಮಾಡುವ ಶಿಕ್ಷೆಯನ್ನು ಲೈಂಗಿಕ ಅಪರಾಧಿಗಳ ವಿರುದ್ಧ 1940ರಿಂದಲೂ ಬಳಸಲಾಗುತ್ತಿದೆ. ದಕ್ಷಿಣ ಕೊರಿಯಾ, ಪೋಲಂಡ್, ಝೆಕ್ ಗಣರಾಜ್ಯ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ಕೆಲವು ರಾಜ್ಯಗಳಲ್ಲಿ ಇದನ್ನು ಕಾನೂನುಬದ್ಧ ಶಿಕ್ಷೆಯ ವಿಧಾನವೆಂದು ಪರಿಗಣಿಸಲಾಗಿದೆ. ಅಧಿಸೂಚಿತ ವೈದ್ಯಕೀಯ ಮಂಡಳಿಯ ಮೂಲಕ ವ್ಯಕ್ತಿಯೊಬ್ಬರ ದೇಹದೊಳಗೆ ಔಷಧವನ್ನು ಸೇರಿಸಲಾಗುತ್ತದೆ. ಈ ಔಷಧವು ದೇಹದಲ್ಲಿರುವ ಟೆಸ್ಟೊಸ್ಟೆರಾನ್ ಅಂಶವನ್ನು ಕಡಿಮೆಗೊಳಿಸುವುದರಿಂದ ಆ ವ್ಯಕ್ತಿ ಕ್ರಮೇಣ ಪುರುಷತ್ವವನ್ನು ಕಳೆದುಕೊಳ್ಳುತ್ತಾನೆ ಎಂದು ಕಾಯ್ದೆಯಲ್ಲಿ ವಿವರಿಸಲಾಗಿದೆ.

ಪಾಕಿಸ್ತಾನದ ಸಚಿವ ಸಂಪುಟ ಅಂಗೀಕರಿಸಿದ ಅತ್ಯಾಚಾರ ವಿರೋಧಿ ಆಧ್ಯಾದೇಶ ‘ಕ್ರಿಮಿನಲ್ ಲಾ ಬಿಲ್(ತಿದ್ದುಪಡಿ) 2021’ಕ್ಕೆ ಸುಮಾರು 1 ವರ್ಷದ ಬಳಿಕ ರಾಷ್ಟ್ರಪತಿ ಆರಿಫ್ ಆಲ್ವಿ ಅನುಮೋದನೆ ನೀಡಿದ್ದಾರೆ. ಪಾಕಿಸ್ತಾನ ದಂಡಸಂಹಿತೆ 1860 ಮತ್ತು ಕ್ರಿಮಿನಲ್ ಕಾರ್ಯವಿಧಾನದ ಸಂಹಿತೆ 1898ಕ್ಕೆ ತಿದ್ದುಪಡಿ ಮಾಡುವ ಮೂಲಕ ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಗುವುದು. ಅತ್ಯಾಚಾರ ಪ್ರಕರಣಗಳ ಕ್ಷಿಪ್ರ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಈ ಆಧ್ಯಾದೇಶ ಅವಕಾಶ ಮಾಡಿಕೊಡುತ್ತದೆ. ಅತ್ಯಾಚಾರ ಅಪರಾಧಿಗಳ ಒಪ್ಪಿಗೆ ಪಡೆದು ಪುರುಷತ್ವ ಹರಣ ನಡೆಸಲಾಗುತ್ತದೆ ಎಂದು ‘ಡಾನ್’ ವರದಿ ಮಾಡಿದೆ.

► ಸಂಸದರ ವಿರೋಧ:

ಈ ಕಾಯ್ದೆ ಇಸ್ಲಾಮ್ ಗೆ ಹಾಗೂ ಶರಿಯಾ ಕಾನೂನಿಗೆ ವಿರೋಧವಾಗಿದೆ ಎಂದು ಜಮಾತ್-ಇ-ಇಸ್ಲಾಮೀ ಪಕ್ಷದ ಸಂಸದ ಮುಷ್ತಾಕ್ ಅಹ್ಮದ್ ಪ್ರತಿಭಟನೆ ನಡೆಸಿದ್ದಾರೆ. ಅತ್ಯಾಚಾರ ಅಪರಾಧಿಗಳನ್ನು ಸಾರ್ವಜನಿಕವಾಗಿ ನೇಣು ಹಾಕಬೇಕು. ಆದರೆ ಪುರುಷತ್ವ ಹರಣದ ಬಗ್ಗೆ ಶರಿಯಾದಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದವರು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ವರದಿಯಾಗುವ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ 4%ಕ್ಕೂ ಕಡಿಮೆ ಪ್ರಕರಣಗಳಲ್ಲಿ ಮಾತ್ರ ಅಪರಾಧ ನಿರ್ಣಯವಾಗುತ್ತದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News