ಸೊಮಾಲಿಯಾದ ಬರಗಾಲ ಪರಿಸ್ಥಿತಿ ಇನ್ನಷ್ಟು ತೀವ್ರ: ಆಹಾರ ಕೊರತೆ ಎದುರಿಸುತ್ತಿರುವ 2 ಮಿಲಿಯನ್‌ ಗೂ ಅಧಿಕ ಜನರು

Update: 2021-11-19 15:57 GMT
ಸಾಂದರ್ಭಿಕ ಚಿತ್ರ (photo:twitter/@AJEnglish)

ವಿಶ್ವಸಂಸ್ಥೆ, ನ.19: ಸೊಮಾಲಿಯಾದಲ್ಲಿ ಬರಗಾಲದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರುವುದರಿಂದ ಆ ದೇಶದಲ್ಲಿ 2 ಮಿಲಿಯನ್‌ಗೂ ಅಧಿಕ ಜನ ಆಹಾರ ಮತ್ತು ನೀರಿನ ತೀವ್ರ ಕೊರತೆ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

‘ಆಫ್ರಿಕಾದ ಕೋಡು(ಕೊಂಬು)’ ಎಂದೇ ಹೆಸರಾಗಿರುವ ಸೊಮಾಲಿಯಾ ಈಗ ಸತತ ನಾಲ್ಕನೇ ವರ್ಷ ಮಳೆಯ ಕೊರತೆಯ ಅಂಚಿನಲ್ಲಿದೆ. ಬಾವಿಗಳು ಬತ್ತಿವೆ. ದೇಶದ 74 ಜಿಲ್ಲೆಗಳಲ್ಲಿ 57 ಜಿಲ್ಲೆಗಳಲ್ಲಿನ ಸುಮಾರು 2.3 ಮಿಲಿಯನ್ ಜನತೆಗೆ (ಈ ಪ್ರದೇಶದಲ್ಲಿನ 20% ಜನತೆ) ನೀರು, ಆಹಾರ ಮತ್ತು ಜಾನುವಾರುಗಳಿಗೆ ಮೇವಿನ ತೀವ್ರ ಕೊರತೆ ಕಾಣಿಸಿಕೊಂಡಿದೆ. ಈ ಸಮಸ್ಯೆಗೆ ಹವಾಮಾನ ಬದಲಾವಣೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಮಾನವೀಯ ವ್ಯವಹಾರಗಳ ಸಂಯೋಜಕ ಸಮಿತಿ (ಒಸಿಎಚ್ಎ) ಮತ್ತು ಸೊಮಾಲಿಯಾ ಸರಕಾರದ ಜಂಟಿ ಹೇಳಿಕೆ ತಿಳಿಸಿದೆ.

ಸೊಮಾಲಿಯಾದ 80%ಕ್ಕೂ ಅಧಿಕ ಮಂದಿ ತೀವ್ರ ಬರಗಾಲದಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಆಹಾರ, ನೀರು ಮತ್ತು ಜಾನುವಾರುಗಳಿಗೆ ಮೇವು ಅರಸುತ್ತಾ ಸುಮಾರು 1 ಲಕ್ಷ ಮಂದಿ ಈಗಾಗಲೇ ಬೇರೆ ಸ್ಥಳಕ್ಕೆ ತೆರಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಯುದ್ಧ ಮತ್ತು ಪ್ರಾಕೃತಿಕ ವಿಪತ್ತುಗಳು ಇತ್ತೀಚಿನ ದಿನಗಳಲ್ಲಿ ಸೊಮಾಲಿಯವನ್ನು ಜರ್ಝರಿತಗೊಳಿಸಿದೆ. 1990ರಿಂದ ಆ ದೇಶದಲ್ಲಿ ಬರಗಾಲದ 12 , ಪ್ರವಾಹದ 19 ಪ್ರಕರಣ ಸೇರಿದಂತೆ ಹವಾಮಾನಕ್ಕೆ ಸಂಬಂಧಿಸಿದ 30ಕ್ಕೂ ಅಧಿಕ ವಿಪತ್ತು ಸಂಭವಿಸಿದೆ. ಹವಾಮಾನಕ್ಕೆ ಸಂಬಂಧಿಸಿದ ದುರಂತಗಳ ಪುನರಾವರ್ತನೆ ಮತ್ತು ತೀವ್ರತೆ ಹೆಚ್ಚುತ್ತಿದೆ ಎಂದು ಹೇಳಿಕೆ ಎಚ್ಚರಿಸಿದೆ.

ದೇಶದ ಹಲವು ಪ್ರದೇಶಗಳಿಗೆ ನೀರಿನ ಮೂಲವಾಗಿರುವ ಜುಬಾ ಮತ್ತು ಶಬೆಲ್ಲೆ ನದಿಗಳ ನೀರು ಈಗಾಗಲೇ ತಳಮಟ್ಟಕ್ಕೆ ಕುಸಿದಿದೆ. ಹಲವು ಜಲಾಶಯಗಳು, ಕೆರೆಗಳು, ಬಾವಿಗಳು ಬತ್ತಿಹೋಗಿವೆ. ಕೃಷಿ, ಬೆಳೆಗಳು ನೀರಿಲ್ಲದೆ ಒಣಗಿವೆ. ದೇಶಕ್ಕೆ ಎದುರಾಗಿರುವ ಮಾನವೀಯ ಬಿಕ್ಕಟ್ಟಿನ ಸಮಸ್ಯೆಯನ್ನು ನಿರಂತರ ಎದುರಿಸಬೇಕಿರುವ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ಬಗ್ಗೆ ಆತಂಕ ಹೆಚ್ಚಿದೆ ಎಂದು ಸೊಮಾಲಿಯಾದ ಮಾನವೀಯ ವ್ಯವಹಾರ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಸಚಿವೆ ಖದೀಜಾ ಡಿರಿಯ್ ಹೇಳಿದ್ದಾರೆ.

ಈ ಮಧ್ಯೆ, ಸೊಮಾಲಿಯಾದಲ್ಲಿ ತೀವ್ರ ಚಂಡಮಾರುತದ ಸಾಧ್ಯತೆಯಿದ್ದು, ನೆರೆ ಸಮಸ್ಯೆ ಉಲ್ಬಣಿಸುವ ಮುನ್ನವೇ ಸರಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೊಮಾಲಿಯಾದಲ್ಲಿ ವಿಶ್ವಸಂಸ್ಥೆಯ ಸ್ಥಾನಿಕ ಮತ್ತು ಮಾನವೀಯ ಉಪಕ್ರಮಗಳ ಸಂಯೋಜಕ ಅದಮ್ ಅಬ್ದುಲ್ ಮೌಲಾ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News