ಸಂಸತ್‌ಗೆ ಟ್ರಾಕ್ಟರ್ ಜಾಥಾದ ಕರೆಯನ್ನು ಇನ್ನೂ ಹಿಂಪಡೆದಿಲ್ಲ: ರೈತ ನಾಯಕರು
ಹೊಸದಿಲ್ಲಿ,ನ.20: ಮುಂಬರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪ್ರತಿದಿನ ಸಂಸತ್‌ಗೆ ಟ್ರಾಕ್ಟರ್ ಜಾಥಾವನ್ನು ನಡೆಸುವ ಪ್ರಸ್ತಾವವನ್ನು ಹಿಂದೆಗೆದುಕೊಂಡಿಲ್ಲ ಮತ್ತು ಈ ಬಗ್ಗೆ ಹಾಗೂ ಆಂದೋಲನದ ಭವಿಷ್ಯದ ಹೆಜ್ಜೆಗಳ ಕುರಿತು ರವಿವಾರದ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ರೈತ ನಾಯಕರು ಶನಿವಾರ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ಆಂದೋಲನದ ವರ್ಷಾಚರಣೆಯ ಅಂಗವಾಗಿ ಸಂಯುಕ್ತ ಕಿಸಾನ ಮೋರ್ಚಾ (ಎಸ್‌ಕೆಎಂ) ನ.29ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರತಿ ದಿನ 500 ರೈತರು ಸಂಸತ್‌ಗೆ ಶಾಂತಿಯುತ ಟ್ರಾಕ್ಟರ್ ಜಾಥಾಗಳನ್ನು ನಡೆಸಲಿದ್ದಾರೆ ಎಂದು ಈ ಹಿಂದೆ ಪ್ರಕಟಿಸಿತ್ತು.
ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಪ್ರಕಟಿಸಿದ್ದು,ಇದನ್ನು ಎಸ್‌ಕೆಎಂ ಸ್ವಾಗತಿಸಿತಾದರೂ,ಅದಕ್ಕಾಗಿ ಸಂಸದೀಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ತಾನು ಕಾಯುವುದಾಗಿ ಹೇಳಿದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯ ಶಾಸನಾತ್ಮಕ ಖಾತರಿಗಾಗಿ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂದೆಗೆದುಕೊಳ್ಳಬೇಕೆಂಬ ತನ್ನ ಬೇಡಿಕೆಯ ಈಡೇರಿಕೆಗಾಗಿ ರೈತರ ಆಂದೋಲನವು ಮುಂದುವರಿಯಲಿದೆ ಎಂದು ಅದು ಸುಳಿವು ನೀಡಿದೆ.
‘ಸಂಸತ್ತಿಗೆ ಟ್ರಾಕ್ಟರ್ ಜಾಥಾದ ನಮ್ಮ ಕರೆಯನ್ನು ನಾವಿನ್ನೂ ಹಿಂಪಡೆದಿಲ್ಲ. ರವಿವಾರ ಸಿಂಘು ಗಡಿಯಲ್ಲಿ ನಡೆಯಲಿರುವ ಸಭೆಯಲ್ಲಿ ಆಂದೋಲನದ ಭವಿಷ್ಯದ ಹಾದಿ ಮತ್ತು ಎಂಎಸ್‌ಪಿ ವಿಷಯಗಳ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ’ ಎಂದು ಎಸ್‌ಕೆಎಂ ಕೋರ್ ಕಮಿಟಿ ಸದಸ್ಯ ದರ್ಶನ ಪಾಲ್ ಸುದ್ದಿಸಂಸ್ಥೆಗೆ ತಿಳಿಸಿದರು. ಭಾರತೀಯ ಕಿಸಾನ ಯೂನಿಯನ್ (ಉಗ್ರಹಾನ್) ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಹಾನ್ ಅವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕೇಂದ್ರವು ಸಂಸತ್ತಿನಲ್ಲಿ ವಿಧ್ಯುಕ್ತವಾಗಿ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವವರೆಗೂ ದಿಲ್ಲಿಯ ಗಡಿಗಳಲ್ಲಿ ರೈತರ ವಾಸ್ತವ್ಯ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದ ಉಗ್ರಹಾನ್, ಪ್ರಧಾನಿಯವರ ಶುಕ್ರವಾರದ ಪ್ರಕಟಣೆಯ ಬಳಿಕ ಹಲವಾರು ರೈತ ಸಂಘಗಳು ಕೃಷಿ ಸಮಸ್ಯೆಗಳು ಮತ್ತು ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಸಭೆಗಳನ್ನು ನಡೆಸುತ್ತಿವೆ. ರವಿವಾರದ ಎಸ್‌ಕೆಎಂ ಸಭೆಯಲ್ಲಿ ಈ ಸಂಘಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಕೇಂದ್ರ ಸರಕಾರವು ಎಲ್ಲ ಬೆಳೆಗಳಿಗೆ ಎಂಎಸ್‌ಪಿಯ ಶಾಸನಬದ್ಧ ಖಾತರಿಯನ್ನು ನೀಡಬೇಕು ಎಂದೂ ಅವರು ಹೇಳಿದರು.
‘ಸಮಾನ ಶ್ರೇಣಿ ಸಮಾನ ಪಿಂಚಣಿ’ಯನ್ನು ನೀಡುವುದಾಗಿ ಕೇಂದ್ರವು ಈ ಹಿಂದೆ ಪ್ರಕಟಿಸಿತ್ತು,ಆದರೆ ಅದಿನ್ನೂ ಅನುಷ್ಠಾನಗೊಂಡಿಲ್ಲವಾದ್ದರಿಂದ ರೈತರು ಕೇಂದ್ರವನ್ನು ನಂಬಲು ಸಾಧ್ಯವಿಲ್ಲ. ಹೀಗಾಗಿ ಕೃಷಿ ಕಾಯ್ದೆಗಳು ಸಂಸತ್ತಿನಲ್ಲಿ ವಿಧ್ಯುಕ್ತವಾಗಿ ರದ್ದುಗೊಳ್ಳುವವರೆಗೆ ಪ್ರತಿಭಟನಾ ಸ್ಥಳದಿಂದ ಕದಲದಿರಲು ನಾವು ನಿರ್ಧರಿಸಿದ್ದೇವೆ. ನಮ್ಮ ಆಂದೋಲನದ ಮೊದಲ ವರ್ಷಾಚರಣೆಗಾಗಿ ದಿಲ್ಲಿ ಗಡಿಗಳಲ್ಲಿ ರೈತರನ್ನು ಸಜ್ಜುಗೊಳಿಸುವುದು ಮುಂದುವರಿಯುತ್ತದೆ. ಟ್ರಾಕ್ಟರ್ ಜಾಥಾವನ್ನು ಹಿಂದೆಗೆದುಕೊಳ್ಳಲು ಈವರೆಗೆ ಕರೆ ಬಂದಿಲ್ಲ ಎಂದು ಇನ್ನೋರ್ವ ರೈತ ನಾಯಕಿ ಹಾಗೂ ಎಸ್‌ಕೆಎಂ ಸದಸ್ಯೆ ಸುದೇಶ ಗೋಯತ್ ಅವರು ಟಿಕ್ರಿ ಗಡಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.