ದಿಲ್ಲಿ: ‘ಕಾರಣ ಹೇಳದೆ’ವ್ಯಕ್ತಿಯನ್ನು ಠಾಣೆಗೆ ಕರೆದ ಪೊಲೀಸರ ವಿರುದ್ಧ ಕ್ರಮಕ್ಕೆ ಕೋರ್ಟ್ ಆದೇಶ
ಹೊಸದಿಲ್ಲಿ: ಯಾವುದೇ ಕಾರಣಗಳನ್ನು ನೀಡದೆ ಸೀಲಾಂಪುರ ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ಪೊಲೀಸರು ನನ್ನನ್ನು ಒತ್ತಾಯಿಸುತ್ತಿದ್ದಾರೆ ಎಂದು ಈಶಾನ್ಯ ದಿಲ್ಲಿಯ ವ್ಯಕ್ತಿಯೊಬ್ಬರು ಹೇಳಿಕೊಂಡ ನಂತರ ದಿಲ್ಲಿ ನ್ಯಾಯಾಲಯವು ಇತ್ತೀಚೆಗೆ ಇಬ್ಬರು ಪೊಲೀಸರ ವಿರುದ್ಧ ಕ್ರಮಕ್ಕೆ ಆದೇಶಿಸಿದೆ.
ವಿಶೇಷ ನ್ಯಾಯಾಧೀಶ ಸುನೀಲ್ ಚೌಧರಿ ಅವರು ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಉಪ ಪೊಲೀಸ್ ಆಯುಕ್ತರಿಗೆ (ಡಿಸಿಪಿ) ಆದೇಶಿಸಿದರು. ಮೇಲಧಿಕಾರಿಗಳ ನಿರ್ದೇಶನಗಳನ್ನು ಪಾಲಿಸದಿರುವುದು ಕಂಡುಬಂದಿದೆ. ಅವರ ನಡವಳಿಕೆಯು "ಅರ್ಜಿದಾರರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸಿದೆ" ಎಂದು ನ್ಯಾಯಾಲಯವು ಗಮನಿಸಿದೆ.
ಅಕ್ಟೋಬರ್ 31 ರಂದು ಬೀಟ್ ಅಧಿಕಾರಿ ವಿಕಾಸ್ ಕುಮಾರ್ ಮನೆಗೆ ಭೇಟಿ ನೀಡಿದ್ದರು ಎಂದು ಅರ್ಜಿದಾರರು ತಿಳಿಸಿದ್ದಾರೆ. ಅಧಿಕಾರಿ ತನ್ನ ಹೆಂಡತಿಯನ್ನು ಪೊಲೀಸ್ ಠಾಣೆಗೆ ಕಳುಹಿಸುವಂತೆ ಕೇಳಿದರು. ಆದರೆ, ಅವರನ್ನು ಏಕೆ ಕರೆದಿದ್ದಾರೆ ಎಂಬುದಕ್ಕೆ ಯಾವುದೇ ಕಾರಣ ನೀಡಿಲ್ಲ.
ಇದುವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.