ನನ್ನನ್ನು ಹಳ್ಳಿಯಿಂದ ದಿಲ್ಲಿಗೆ ತಲುಪಿಸಿದ್ದು ಮಾಧ್ಯಮ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ

Update: 2021-11-22 12:19 GMT

ಮಂಗಳೂರು, ನ. 22: ನನಗೆ ಇಂದು ಸಿಗುತ್ತಿರುವ ಮರ್ಯಾದೆ ಯಾವುದೇ ರೀತಿಯ ಐಶ್ವರ್ಯಕ್ಕಿಂತಲೂ ಮಿಗಿಲಾಗಿದ್ದು, ಹಳ್ಳಿಯ ಸಾಮಾನ್ಯನೊಬ್ಬನನ್ನು ದಿಲ್ಲಿಗೆ ತಲುಪಿಸಿದ್ದು ಮಾಧ್ಯಮ ಶಕ್ತಿ ಎಂದು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಮೀಡಿಯಾ ಅಲುಮ್ನಿ ಅಸೋಸಿಯೇಶ್ ಆಫ್ ಮಂಗಳಗಂಗೋತ್ರಿ (ಮಾಮ್) ವತಿಯಿಂದ ನೀಡಲಾಗುವ ಮಾಮ್ ಇನ್‌ಸ್ಪೈರ್ ಪ್ರಶಸ್ತಿಯನ್ನು ಮೂವರು ಪ್ರತಿಭಾನ್ವಿತರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.

ಸೆಂಟ್ರಲ್ ಮಾರುಕಟ್ಟೆಯಲ್ಲಿ ಇಸಾಕ್ ಹಾಜಿಯವರಿಂದ ಸಾಲ ಪಡೆದು ಕಿತ್ತಳೆ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಕ್ತಿ ಇಂದು ಸಕಲ ಗೌರವ, ಮರ್ಯಾದೆ ಪಡೆಯಲು ಸಾಧ್ಯವಾಗಿದ್ದು, ಮಾಧ್ಯಮದವರ ಪ್ರೋತ್ಸಾಹ, ಬೆಂಬಲದಿಂದಾಗಿ. ಅವರಿಗೆಲ್ಲಾ ನಾನು ಚಿರಋಣಿಯಾಗಿರುತ್ತೇನೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪದವಿ ವಿಭಾಗದಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ದುರ್ಗಾ ಪ್ರಸನ್ನ, ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಜ್ಞಾ ಒಡಿಲ್ನಾಳ ಹಾಗೂ ಆಳ್ವಾಸ್ ಕಾಲೇಜಿನ ಶ್ರೀರಕ್ಷಾ ರಾವ್ ಪುನರೂರು ಅವರಿಗೆ ಮಾಮ್ ಇನ್‌ಸ್ಪೈರ್ ಪ್ರಶಸ್ತಿ ನೀಡಿ ಪದ್ಮಶ್ರೀ ಹಾಜಬ್ಬ ಗೌರವಿಸಿದರು.

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿಯವರು ಮಾತನಾಡಿ, ಪದ್ಮಶ್ರೀ ಹಾಜಬ್ಬರಂತಹ ಸಾಕಷ್ಟು ಎಲೆಮರೆಯ ಸಾಧಕರು ನಮ್ಮ ನಡುವೆ ಇದ್ದು, ಅವರನ್ನು ಜಗತ್ತಿಗೆ ಪರಿಚಯಿಸುವ, ಅವರಿಗಾಗಿ ತಮ್ಮ ಮಾಧ್ಯಮದಲ್ಲಿ ಅವಕಾಶ ನೀಡುವ ಕಾರ್ಯವನ್ನು ಮಾಡಬೇಕು ಎಂದು ಯುವ ಪತ್ರಕರ್ತಕರ್ತರಿಗೆ ಸಲಹೆ ನೀಡಿದರು.

ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಮಾತನಾಡಿ ಪತ್ರಿಕೋದ್ಯಮ ಹೊಸ ಚಿಂತನೆ, ಬದಲಾವಣೆಗಳೊಂದಿಗೆ ಹೊಸ ರೂಪವನ್ನು ಪಡೆಯಬೇಕೆಂದು ಆಶಯ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಹಾಗೂ ಮಾಮ್ ಅಧ್ಯಕ್ಷ ಸುರೇಶ್ ಪುದುವೆಟ್ಟು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಕೃಷ್ಣ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಶರತ್ ಹೆಗ್ಡೆ ಸ್ವಾಗತಿಸಿದರು. ವೇಣು ವಿನೋದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News