ಉಳ್ಳಾಲ ದರ್ಗಾ ವಿವಾದದ ಬಗ್ಗೆ ಈಗ ಚರ್ಚೆ ಬೇಡ : ಶಾಫಿ ಸಅದಿ

Update: 2021-11-22 13:47 GMT

ಉಳ್ಳಾಲ : ಇಲ್ಲಿನ ದರ್ಗಾ ವಿವಾದದ ಬಗ್ಗೆ ಈಗ ಚರ್ಚೆ ಮಾಡುವುದು ಬೇಡ. ಅದನ್ನು ಬದಿಗಿಟ್ಟು ಉರೂಸ್ ಕಡೆ ಗಮನ ಹರಿಸಬೇಕು. ಆಡಳಿತ ಸಮಿತಿ ಈ ಬಗ್ಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ ಎಂದು ವಕ್ಫ್ ಬೋರ್ಡ್ ರಾಜ್ಯ ಅಧ್ಯಕ್ಷ ಶಾಫಿ ಸಅದಿ ಹೇಳಿದರು.

ಅವರು ವಕ್ಫ್ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿ ಉಳ್ಳಾಲ ದರ್ಗಾ ಭೇಟಿ ನೀಡಿ ಝಿಯಾರತ್ ನಡೆಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

ಬೇರೆ ದರ್ಗಾಕ್ಕೆ ಹೋಲಿಸಿದರೆ ಇಲ್ಲಿಯದ್ದು ಸಣ್ಣ ಸಮಸ್ಯೆ. ಇದಕ್ಕೆ ಉರೂಸ್ ಮುಗಿದ ಬಳಿಕ ಪರಿಹಾರ ಕಂಡುಕೊಳ್ಳಲಾಗುವುದು.
ಉತ್ತರ ಕರ್ನಾಟಕದಲ್ಲಿ ಜನತೆ ಊಟಕ್ಕೆ ಗತಿ ಇಲ್ಲದೇ ಚಡಪಡಿಸುತ್ತಿದೆ. ಯಾವ ಕಾರಣಕ್ಕೂ ವಿವಾದ ಮಾಡದೇ ಮುಂಬರುವ ಉರೂಸ್ ಕಾರ್ಯಕ್ರಮದಲ್ಲಿ ಎಲ್ಲರೂ ಸೇರಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ವಕ್ಫ್ ನಿಂದ ನೀಡಲಾಗುವ ಅನುದಾನ ನಿಲ್ಲಿಸುವುದಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಮೊದಲೇ ಹೇಳಿದ್ದೇನೆ. ಇಲ್ಲಿ ಅಭಿವೃದ್ಧಿ ಆಗಬೇಕು. ಉರೂಸ್ ಗೆ ಸಂಬಂಧಿಸಿ ಆಡಳಿತ ಸಮಿತಿಗೆ ಪೂರ್ಣ ಜವಾಬ್ದಾರಿ ಇದೆ. ಲೋಪದೋಷಗಳು ಬರಬಾರದು. ಉರೂಸ್ ಮುಗಿಯುವ ತನಕ ವಿವಾದದ ಬಗೆ ಚರ್ಚೆ ಮಾಡುವುದಿಲ್ಲ. ಸೆಸ್ ವಿಚಾರದಲ್ಲಿ ಮುಂದೆ ತೀರ್ಮಾನ ಕೈಗೊಳ್ಳಲಾಗುವುದು. ದರ್ಗಾ ದಲ್ಲಿ ನನಗೂ ಜವಾಬ್ದಾರಿ ಇದೆ.  ಸಯ್ಯಿದ್ ಮದನಿ ಅವರ ಆಶೀರ್ವಾದದಿಂದ ಅಧಿಕಾರ ಸಿಕ್ಕಿದೆ ಎಂದರು.

ರಾಜ್ಯ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ರಿಯಾಝ್ ಮಾತನಾಡಿ, ವಿವಾದಗಳನ್ನು ಬಿಟ್ಟು ಒಟ್ಟು ಸೇರಿ ಉರೂಸ್ ಮಾಡಬೇಕು. ಉರೂಸ್ ಗೆ ತಮ್ಮಿಂದ ಆಗುವ ಸಹಕಾರ ನೀಡಲಾಗುವುದು ಸೆಸ್ ಪಾವತಿಯಿಂದ ಬರುವ ಆದಾಯ ನಿರ್ವಹಣೆಗೆ ಹೋಗುತ್ತದೆ. ಈ ಸಮಸ್ಯೆ ಪರಿಹಾರಕ್ಕೆ ಉರೂಸ್ ಮುಗಿದ ಬಳಿಕ ಸಭೆ ಕರೆಯುತ್ತೇವೆ. ಆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳಲಾಗುವುದು  ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ವಕ್ಫ್ ಬೋರ್ಡ್ ರಾಜ್ಯ ಅಧ್ಯಕ್ಷ ಶಾಫಿ ಸಅದಿ ಅವರನ್ನು ಹೂ ಹಾರ ಹಾಕಿ ಸ್ವಾಗತಿಸಿದರು. ವಕ್ಫ್ ಸದಸ್ಯ ಯಾಕೂಬ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ದರ್ಗಾ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಬಾವಾ ಮೊಹಮ್ಮದ್, ಜತೆ ಕಾರ್ಯದರ್ಶಿ ನೌಶಾದ್ ಅಲಿ, ಲೆಕ್ಕ ಪರಿಶೋಧಕ ಯುಟಿ ಇಲ್ಯಾಸ್, ಉರೂಸ್ ಮೇಲ್ವಿಚಾರಣೆ ಸಮಿತಿ, ಉರೂಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News