ಗರಿಷ್ಠ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ರಾಜ್ಯ ಎಂದೆನಿಸಿಕೊಳ್ಳಲಿರುವ ಉತ್ತರಪ್ರದೇಶ
ಲಕ್ನೊ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 25 ರಂದು ಜೆವಾರ್‌ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಉತ್ತರ ಪ್ರದೇಶವು ದೇಶದಲ್ಲಿ ಅತ್ಯಂತ ಹೆಚ್ಚು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಲಿರುವ ರಾಜ್ಯ ಎನಿಸಿಕೊಳ್ಳಲಿದೆ ಎಂದು ರಾಜ್ಯ ಸರಕಾರ ಸೋಮವಾರ ಹೇಳಿದೆ.
ರಾಜ್ಯವು ಪ್ರಸ್ತುತ ಎಂಟು ಕಾರ್ಯಾಚರಣಾ ವಿಮಾನ ನಿಲ್ದಾಣಗಳನ್ನು ಹೊಂದಿದ್ದು, 13 ವಿಮಾನ ನಿಲ್ದಾಣಗಳು ಹಾಗೂ ಏಳು ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
"ನವೆಂಬರ್ 25 ರಂದು ನೋಯ್ಡಾ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಶಿಲಾನ್ಯಾಸ ಮತ್ತು ಶಂಕುಸ್ಥಾಪನೆ ಸಮಾರಂಭವನ್ನು ನಿಗದಿಪಡಿಸಲಾಗಿದ್ದು, ರಾಜ್ಯವು ಈಗ ಐದು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದುವ ಹಾದಿಯಲ್ಲಿದೆ . ಇದು ಭಾರತದ ಯಾವುದೇ ರಾಜ್ಯಕ್ಕಿಂತ ಅತ್ಯಧಿಕವಾಗಿದೆ" ಎಂದು ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಉತ್ತರ ಪ್ರದೇಶವು 2012 ರವರೆಗೆ ಲಕ್ನೋ ಹಾಗೂ ವಾರಣಾಸಿ ಯಲ್ಲಿ ಕೇವಲ ಎರಡು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿತ್ತು. ಕುಶಿನಗರದಲ್ಲಿ ಮೂರನೇ ಅಂತರ್ ರಾಷ್ಟ್ರೀಯ ವಿಮಾನನಿಲ್ದಾಣವನ್ನು ಅಕ್ಟೋಬರ್ 20 ರಂದು ಪ್ರಧಾನಿ ಮೋದಿಯವರು ಉದ್ಘಾಟಿಸಿದ ನಂತರ ಕಾರ್ಯಾರಂಭಗೊಂಡಿತು. ಆದರೆ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣದ ಕೆಲಸವು ಭರದಿಂದ ಸಾಗುತ್ತಿದೆ ಹಾಗೂ ವಿಮಾನ ಸೇವೆಗಳು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ಐದನೇ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವು ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ನೋಯ್ಡಾ ಬಳಿಯ ಜೆವಾರ್‌ನಲ್ಲಿ ತಲೆ ಎತ್ತಲಿದೆ ಎಂದು ಅದು ಹೇಳಿದೆ.