ಜಮ್ಮು-ಕಾಶ್ಮೀರದ ಮಾನವ ಹಕ್ಕುಗಳ ಹೋರಾಟಗಾರ ಖುರ್ರಂ ಪರ್ವೇಝ್ ಬಂಧನ
ಹೊಸದಿಲ್ಲಿ: ಭಯೋತ್ಪಾದಕರಿಗೆ ಹಣ ಪೂರೈಕೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಜಮ್ಮು ಹಾಗೂ ಕಾಶ್ಮೀರದ ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ ಖುರ್ರಂ ಪರ್ವೇಝ್ ಅವರನ್ನು ಬಂಧಿಸಿದೆ.
ಸೋಮವಾರ ಮುಂಜಾನೆ ಶ್ರೀನಗರದಲ್ಲಿರುವ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ನಂತರ ಭಯೋತ್ಪಾದನಾ ನಿಗ್ರಹ ಸಂಸ್ಥೆ ಖುರ್ರಂ ಪರ್ವೇಝ್ ಅವರನ್ನು ಬಂಧಿಸಿತು. ತನಿಖಾ ಸಂಸ್ಥೆಯು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಗಳ ನೆರವಿನೊಂದಿಗೆ ಶೋಧ ನಡೆಸಿತು.
ಸೋನ್ವಾರ್‌ನಲ್ಲಿರುವ ಪರ್ವೇಝ್ ಅವರ ನಿವಾಸ ಹಾಗೂ ಶ್ರೀನಗರದ ಅಮೀರಾ ಕಡಲ್‌ನಲ್ಲಿರುವ ಕಚೇರಿ ಸಹಿತ ಜಮ್ಮು -ಕಾಶ್ಮೀರದ ಇತರ ಸ್ಥಳಗಳಲ್ಲಿ ಸೋಮವಾರ ಮುಂಜಾನೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿತು.
ಪರ್ವೇಝ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಎನ್ ಐಎ ಅಧಿಕಾರಿಗಳು ಪರ್ವೇಝ್ ಅವರನ್ನು ಮಧ್ಯಾಹ್ನ ಅವರ ನಿವಾಸದಿಂದ ಕರೆದೊಯ್ದರು. ನಂತರ ಕಾಶ್ಮೀರ ಕಣಿವೆಯಲ್ಲಿರುವ ಏಜೆನ್ಸಿಯ ಕಚೇರಿಯಲ್ಲಿ ವಿಚಾರಣೆಯ ನಂತರ ಅವರನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎನ್ ಸಿಬಿಯು ಪರ್ವೇಝ್ ಅವರ ನಿವಾಸ ಮತ್ತು ಕಚೇರಿ ಸೇರಿದಂತೆ ಕಾಶ್ಮೀರ ಕಣಿವೆಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತ್ತು.