×
Ad

ವಸ್ತುನಿಷ್ಠ,ನಿಷ್ಪಕ್ಷಪಾತವಲ್ಲ: ದಿಲ್ಲಿ ಗಲಭೆ ಕುರಿತ ವೀಡಿಯೊಗಳನ್ನು ತೆಗೆದುಹಾಕಲು ಟೈಮ್ಸ್‌ ನೌ ಗೆ NBSDA ಸೂಚನೆ

Update: 2021-11-23 12:32 IST

ಹೊಸದಿಲ್ಲಿ: "ಯಾವುದೇ ಕಾರ್ಯಕ್ರಮದ ನಿರೂಪಕರು ತಮ್ಮ ಚರ್ಚೆಯ ವೇಳೆ ಯಾವುದೇ ಅಜೆಂಡಾವನ್ನು ಬೆಂಬಲಿಸಬಾರದು" ಎಂದು ನ್ಯೂಸ್ ಬ್ರಾಡ್‍ಕಾಸ್ಟಿಂಗ್ ಎಂಡ್ ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿಯು ಟೈಮ್ಸ್ ನೌಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತನ್ನ ಆದೇಶದಲ್ಲಿ ಹೇಳಿದೆ.

ದಿಲ್ಲಿ ಹಿಂಸಾಚಾರ ಕುರಿತಂತೆ ಟೈಮ್ಸ್ ನೌ ವಾಹಿನಿಯ ಎರಡು ಪ್ರೈಮ್ ಟೈಮ್ ಚರ್ಚಾ ಕಾರ್ಯಕ್ರಮಗಳನ್ನು ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತಕರವಾಗಿ ನಡೆಸಿಲ್ಲ ಹಾಗೂ ಪ್ರಸಾರ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಪ್ರಾಧಿಕಾರ ತನ್ನ ಆದೇಶದಲ್ಲಿ ಹೇಳಿದೆ.

ವಾಹಿನಿಯ ಎರಡು ಪ್ರೈಮ್ ಟೈಮ್ ಶೋ ಗಳಾದ ʼಇಂಡಾ ಅಪ್‍ಫ್ರಂಟ್ʼ ನ "ಶಾಕಿಂಗ್ ಸೀಕ್ರೆಟ್ ಅಡ್ಮಿಶನ್ ಔಟ್ ಇನ್ ಉಮರ್ಸ್ ಅರೆಸ್ಟ್, ಡಸ್ ಲೀವ್ ಲಾಬಿ ನೋ ದಿ ಟ್ರುತ್ ಡೆಲ್ಲಿ ರಯಟ್ಸ್ ಕೀ ವಿಟ್ನೆಸ್ ಇಂಟಿಮಿಡೇಟೆಡ್, ಥ್ರೆಟ್ ಲಿಂಕ್ಡ್ ಟು ಕಿಂಗ್‍ಪಿನ್?"  ಮತ್ತು "ಡೆಲ್ಲಿ ರಯಟ್ಸ್: ಪ್ಲಾಟ್ ಟು ಕಿಲ್ ಕಾಪ್ಸ್ ಎಂಡ್ ಕಾಫಿರ್ಸ್ ಎಕ್ಸಪೋಸ್ಡ್: ಪೀಸ್‍ಫುಲ್ ಪ್ರೊಟೆಸ್ಟ್ ಎ ಫೆಕೇಡ್?" ಎಂಬ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನಿರೂಪಕರಾದ ರಾಹುಲ್ ಶಿವಶಂಕರ್ ಮತ್ತು ಪದ್ಮಾ ಜೋಶಿ ವಿರುದ್ಧ ಉತ್ಕರ್ಷ್ ಮಿಶ್ರಾ ಎಂಬ ವಕೀಲರು ದೂರು ದಾಖಲಿಸಿದ್ದರು.

ಟೈಮ್ಸ್ ನೌ ವಾಹಿನಿಯು  ದಿಲ್ಲಿ ಹಿಂಸಾಚಾರ ತನಿಖೆಯ ಕುರಿತಾದ ತನ್ನ ವರದಿಗಳನ್ನು ವಸ್ತುನಿಷ್ಠವಾಗಿ ಮಾಡಿಲ್ಲ ಎಂದು ದೂರಲಾಗಿತ್ತು. ದಿಲ್ಲಿ ಪೊಲೀಸರ ತನಿಖೆಯ ಬಗ್ಗೆ ಅಸಮಾಧಾನ ಹೊಂದಿರುವ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಅವರನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸಿ ಈ ಮೂಲಕ ವಾಸ್ತವಾಂಶ ತಿಳಿಯುವ ವೀಕ್ಷಕರ ಹಕ್ಕುಗಳನ್ನು ದಮನಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು.

ಟಿವಿ ವಾಹಿನಿಗೆ ತನ್ನ ಆಯ್ಕೆಯ ವಿಷಯದಲ್ಲಿ ಚರ್ಚೆ ಕಾರ್ಯಕ್ರಮ ನಡೆಸುವ ಸ್ವಾತಂತ್ರ್ಯವಿದೆಯಾದರೂ ಈ ಎರಡು ಕಾರ್ಯಕ್ರಮಗಳ ನಿರೂಪಕರು ನಿಷ್ಪಕ್ಷಪಾತವಾಗಿ ಹಾಗೂ ವಸ್ತುನಿಷ್ಠವಾಗಿ ಕಾರ್ಯಕ್ರಮಗಳನ್ನು ನಡೆಸಿಲ್ಲ ಹಾಗೂ ಈ ಮೂಲಕ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳ ಸಹಿತ ಪ್ರಾಧಿಕಾರದ ಹಲವು ಮಾರ್ಗಸೂಚಿಗಳನ್ನು ಹಾಗೂ ಮೂಲಭೂತ ತತ್ವಗಳನ್ನು ಉಲ್ಲಂಘಿಸಿದೆ ಎಂದು  ನ್ಯಾಯಾಲಯ ಹೇಳಿದೆಯಲ್ಲದೆ ಈ ಎರಡು ಶೋ ಗಳ ವೀಡಿಯೋವನ್ನು ವೆಬ್‍ಸೈಟ್‍ನಿಂದ ಹಾಗೂ ಎಲ್ಲಾ ಸಾಮಾಜಿಕ ಜಾಲತಾಣ ಹಾಗೂ ಇತರ ವೇದಿಕೆಗಳಿಂದ ತೆಗೆದುಹಾಕಬೇಕೆಂದು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News