'ತಾಲಿಬಾನಿ ಶೈಲಿಯ ದಾಳಿ' ಬಿಜೆಪಿ ಶಾಸಕ ಈ ಮಾತುಗಳನ್ನು ಆಡಿದ್ದಾರೆಯೇ?: ತ್ರಿಪುರಾ ಸರಕಾರವನ್ನು ಪ್ರಶ್ನಿಸಿದ ಸುಪ್ರೀಂ

Update: 2021-11-23 10:31 GMT

ಹೊಸದಿಲ್ಲಿ: ಬಿಜೆಪಿ ಆಡಳಿತದ ತ್ರಿಪುರಾದಲ್ಲಿ ಸ್ಥಳೀಯಾಡಳಿತ ಚುನಾವಣೆಗೆ ಮುಂಚಿತವಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು  ಸುಪ್ರೀಂ ಕೋರ್ಟ್ ನಲ್ಲಿ ಇಂದು ವಿಚಾರಣೆ ವೇಳೆ ತೃಣಮೂಲ ಕಾಂಗ್ರೆಸ್ ಹೇಳಿತಲ್ಲದೆ ಇದಕ್ಕೆ ಉದಾಹರಣೆಯಾಗಿ ತನ್ನ ಪಕ್ಷದ ನಾಯಕರ ವಿರುದ್ಧದ ಹಿಂಸೆ ಹಾಗೂ ತೃಣಮೂಲ ಕಾರ್ಯಕರ್ತರ ವಿರುದ್ಧ `ತಾಲಿಬಾನಿ ಶೈಲಿ'ಯಲ್ಲಿ ಕಾರ್ಯಾಚರಿಸಿ ಎಂದರೆನ್ನಲಾದ ಆಡಳಿತ ಬಿಜೆಪಿ ಶಾಸಕರೊಬ್ಬರ ಭಾಷಣವನ್ನು ಕೂಡ ಉಲ್ಲೇಖಿಸಿದೆ.

ರಾಜ್ಯದಲ್ಲಿ ನ್ಯಾಯಯುತ ಚುನಾವಣೆಗಾಗಿ ತೃಣಮೂಲ ನಾಯಕರಿಗೆ ರಕ್ಷಣೆ ಒದಗಿಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿದ್ದರೂ  ಅದರ ಪಾಲನೆಯಾಗದೇ ಇರುವುದರಿಂದ ರಾಜ್ಯ ಸರಕಾರದ ಅಧಿಕಾರಿಗಳು ನ್ಯಾಯಾಂಗ ನಿಂದನೆಗೈದಿದ್ದಾರೆ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.

ಬಿಜೆಪಿ ಶಾಸಕ ಅರುಣ್ ಚಂದ್ರ ಭೌಮಿಕ್ ಅವರು ಆಗಸ್ಟ್ 18ರಂದು ತೃಣಮೂಲ ನಾಯಕರ ವಿರುದ್ಧ `ತಾಲಿಬಾನಿ ಶೈಲಿ' ಕಾರ್ಯಾಚರಣೆಗೆ ಕರೆ ನೀಡಿದ ಭಾಷಣ ಕುರಿತು ತ್ರಿಪುರಾ ಸರಕಾರದಿಂದ ಸ್ಪಷ್ಟೀಕರಣವನ್ನು ಸುಪ್ರೀಂ ಕೋರ್ಟ್ ಕೇಳಿದೆ.

"ಶಾಸಕ ಆ ಭಾಷಣ ನೀಡಿದ್ದರೇ? ಹೌದೆಂದರೆ ಅವರ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ?" ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ವಿಕ್ರಮ್ ನಾಥ್ ಅವರ ಪೀಠ ಪ್ರಶ್ನಿಸಿದೆ.

"ಶಾಸಕರನ್ನು ಪ್ರಶ್ನಿಸಲು ಕರೆಸಲಾಗಿದೆ. ಅವರ ಭಾಷಣ ಹಿಂಸೆಗೆ ಪ್ರಚೋದನೆ ನೀಡಿದೆ ಎಂದು ಕಂಡುಬಂದಿಲ್ಲ, ಅರ್ಜಿದಾರರು ಸುಮ್ಮನೆ ವಿಷಯವನ್ನು ಉತ್ಪ್ರೇಕ್ಷಿಸುತ್ತಿದ್ದಾರೆ" ಎಂದು ರಾಜ್ಯ ಸರಕಾರದ ಪರ ವಕೀಲ ಮಹೇಶ್ ಜೇಠ್ಮಲಾನಿ ಹೇಳಿದರು.

ಆದರೆ ಪರಿಸ್ಥಿತಿ ಗಂಭೀರವಾಗಿದೆ ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ನಟಿ, ತೃಣಮೂಲ ನಾಯಕಿ ಸಯೋನಿ ಘೋಷ್ ಅವರು ಸಂತ್ರಸ್ತೆಯಾಗಿದ್ದರೂ ಅವರ ವಿರುದ್ಧವೇ ಕೊಲೆಯತ್ನ ಪ್ರಕರಣ ದಾಖಲಾಗಿದೆ" ಎಂದು ತೃಣಮೂಲ ಪರ ಹಿರಿಯ ವಕೀಲ ಜೈದೀಪ್ ಗುಪ್ತಾ ಆರೋಪಿಸಿದರಲ್ಲದೆ ಪರಿಸ್ಥಿತಿ ಅದೆಷ್ಟು ಗಂಭೀರವಾಗಿದೆಯೆಂದರೆ ಸಿಪಿಎಂ ಸಹಿತ ತನ್ನ ಅಭ್ಯರ್ಥಿಯನ್ನು ವಾಪಸ್ ಪಡೆದಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿದ ಜಸ್ಟಿಸ್ ಡಿ ವೈ ಚಂದ್ರಚೂಡ್, ಹೆಚ್ಚುವರಿ ಕೇಂದ್ರ ಅರೆಸೇನಾ ಪಡೆಯ ತುಕಡಿಗಳನ್ನು ನಿಯೋಜಿಸುವಂತೆ ರಾಜ್ಯ ಪೊಲೀಸರಿಗೆ ಸೂಚಿಸಿದರು.

ನವೆಂಬರ್ 25ರಂದು ತ್ರಿಪುರಾ ಸ್ಥಳೀಯಾಡಳಿತ ಚುನಾವಣೆಗಳು ನಡೆಯಲಿವೆ. ರಾಜ್ಯದಲ್ಲಿ 2023ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿರುವ ತೃಣಮೂಲ ಈಗ ಸ್ಥಳೀಯಾಡಳಿತ ಚುನಾವಣೆಯಲ್ಲೂ ಸ್ಪರ್ಧಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News