ತ್ರಿಪುರಾ ಹಿಂಸಾಚಾರ ಪ್ರಕರಣ: ಟಿಎಂಸಿ ಸಂಸದರಿಂದ ಅಮಿತ್ ಶಾ ಭೇಟಿ

Update: 2021-11-23 17:01 GMT

ಅಗರ್ತಲಾ,ನ.23ಆ: ತ್ರಿಪುರಾ ಪೊಲೀಸರು ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಟಿಎಂಸಿ ಸಂಸದರ ನಿಯೋಗವೊಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿತು.

ಸೋಮವಾರ ಟಿಎಂಸಿ ಸಂಸದರ ನಿಯೋಗವೊಂದು ರಾಜಧಾನಿ ದಿಲ್ಲಿಗೆ ಆಗಮಿಸಿ, ಗೃಹ ಸಚಿವಾಲಯದ ಹೊರಗೆ ಧರಣಿ ನಡೆಸಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿತ್ತು. ಗೃಹ ಸಚಿವ ಅಮಿತ್ ಶಾ ರನ್ನು ಭೇಟಿಯಾಗಲು ತಮಗೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದರು.

ಅಗರ್ತಲಾದ ಪೊಲೀಸ್ ಠಾಣೆಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು, ಬಿಜೆಪಿ ಬೆಂಬಲಿಗರು ದೊಣ್ಣೆ ಹಾಗೂ ಕಲ್ಲುಗಳಿಂದ ಥಳಿಸಿದ್ದಾರೆಂದು ತೃಣಮೂಲ ಕಾಂಗ್ರೆಸ್ ಆಪಾದಿಸಿದೆ.

ಟಿಎಂಸಿ ನಾಯಕಿ ಸಯೋನಿ ಘೋಷ್ ಅವರನ್ನು ವಿಚಾರಣೆಗಾಗಿ ಪೊಲೀಸರು ಕರೆದೊಯ್ದ ಸಂದರ್ಭ,ಪಕ್ಷದ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಠಾಣೆಯ ಹೊರಗೆ ಜಮಾಯಿಸಿದ್ದಾಗ ಈ ಘಟನೆ ನಡೆದಿದೆ.

ಮಾಜಿ ಚಿತ್ರನಟಿಯಾಗಿದ್ದು ಪ್ರಸಕ್ತ ಟಿಎಂಸಿ ನಾಯಕಿಯಾಗಿರುವ ಸಯೋನಿ ಘೋಷ್ ಅವರು, ಶನಿವಾರ ರಾತ್ರಿ ಮುಖ್ಯಮಂತ್ರಿ ಬಿಪ್ಲಬ್ ಘೋಷ್ ಅವರ ಸಭೆಯಲ್ಲಿ 'ಖೇಲಾ ಹೋಬೆ'ಎಂದು ಬೆಂಬಲಿಗರೊಂದಿಗೆ ಘೋಷಣೆ ಕೂಗಿ ಗಲಾಟೆ ಮಾಡಿದ್ದರು. ಘೋಷ್ ಅವರನ್ನು ಬಂಧಿಸಿದ ತ್ರಿಪುರಾ ಪೊಲೀಸರು ಆಕೆಯ ವಿರುದ್ಧ ಕೊಲೆಯತ್ನ ಆರೋಪವನ್ನು ಹೊರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News