ಕೇಂದ್ರ ಸರಕಾರ ಕೃಷಿ ಕಾಯ್ದೆ ಮೊದಲೇ ಹಿಂಪಡೆದಿದ್ದರೆ 700ಕ್ಕೂ ಅಧಿಕ ರೈತರ ಜೀವಗಳು ಉಳಿಯುತ್ತಿತ್ತು: ಬಿಜೆಪಿ ನಾಯಕ

Update: 2021-11-24 17:04 GMT

ಬಾಲಿಯಾ (ಉತ್ತರಪ್ರದೇಶ),ನ.24: ತನ್ನದೇ ಪಕ್ಷದ ಕೇಂದ್ರೀಯ ನಾಯಕತ್ವದ ವಿರುದ್ಧ ಉತ್ತರ ಪ್ರದೇಶದ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ರಾಮ್ ಇಕ್ಬಾಲ್ ಸಿಂಗ್ ಅವರು, ಕೇಂದ್ರ ಸರಕಾರವು ರೈತರ ಪ್ರತಿಭಟನೆ ಆರಂಭಿಸಿದ ಮೂವತ್ತು ದಿನಗಳೊಳಗೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿದ್ದಲ್ಲಿ 700ಕ್ಕೂ ಅಧಿಕ ರೈತರು ಸಾವನ್ನಪ್ಪುವುದನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯದ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್‌ಯನ್ನು ಭಿನ್ನಾಣಗಿತ್ತಿ ಎಂಬುದಾಗಿ ಟೀಕಿಸಿದ್ದಾರೆ. ಒಂದು ವೇಳೆ ರೈತ ಚಳವಳಿ ಆರಂಭಗೊಂಡ 30 ದಿನಗಳೊಳಗೆ ಕೇಂದ್ರ ಸರಕಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದಿದ್ದಲ್ಲಿ 700ಕ್ಕೂ ಅಧಿಕ ರೈತರ ಜೀವ ಉಳಿಯುತ್ತಿತ್ತು. ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರವು ಒಂದೆಡೆ ಸಂತಸದ ಸಂಕೇತವಾಗಿದ್ದರೆ, ಇನ್ನೊಂದು ರೀತಿಯಲ್ಲಿ ಅದು ವಿಳಂಬದ ನಡೆಯಾಗಿದೆ ಎಂದು ಸಿಂಗ್ ಅವರು ಮಂಗಳವಾರ ಸಂಜೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ರೈತರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆಯೂ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭ ಮೃತಪಟ್ಟ ಪ್ರತಿಯೊಬಂದು ರೈತ ಕುಟುಂಬಕ್ಕೂ ಕೇಂದ್ರ ಸರಕಾರವು ಕನಿಷ್ಠ 50 ಸಾವಿರ ರೂ. ಪರಿಹಾರ ನೀಡಬೇಕೆಂದು ಸಿಂಗ್ ಆಗ್ರಹಿಸಿದರು. ‘‘ ಒಂದು ವೇಳೆ ಪ್ರತಿಭಟನೆಯ ಸಂದರ್ಭ ಮೃತಪಟ್ಟ ರೈತರ ಅವಲಂಭಿತರು ಅನಕ್ಷರಸ್ಥರಾಗಿದ್ದಲ್ಲಿ, ಅಂತಹ ಕುಟುಂಬಗಳಿಗೆ ಕೇಂದ್ರ ಸರಕಾರವು 20 ಸಾವಿರ ರೂ. ಮಾಸಿಕ ಗೌರವಧನವನ್ನು ನೀಡಬೇಕೆಂದು ಅವರು ತಿಳಿಸಿದರು.

ಒಂದು ವೇಳೆ ಅಪ್ರಾಪ್ತ ವಯಸ್ಸಿನ ಅವಲಂಭಿತರು ಇದ್ದಲ್ಲಿ ಸರಕಾರವು ಅತನ ಅತವಾ ಆಕೆಯ ಶಿಕ್ಷಣದ ಖರ್ಚನ್ನು ಭರಿಸಬೇಕೆಂದವರು ಆಗ್ರಹಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೊದಲು ಕೇಂದ್ರ ಸರಕಾರವು ರೈತರೊಂದಿಗೆ ಸಮಾಲೋಚನೆ ನಡೆಸಿದ್ದರೆ ಅವರು ಪ್ರತಿಭಟನೆಯ ಹಾದಿ ಹಿಡಿಯುತ್ತಿರಲಿಲ್ಲವೆಂದು ರಾಮ್ ಇಕ್ಬಾಲ್ ಸಿಂಗ್ ಹೇಳಿದ್ದಾರೆ. ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸಲು ಕಾನೂನೊಂದನ್ನು ಜಾರಿಗೊಳಿಸಬೇಕೆಂದು ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು.

ಸ್ವಾತಂತ್ರ ಹಾಗೂ ಗಾಂಧೀಜಿ ಕುರಿತ ವಿವಾದಾತ್ಮಕ ಹೇಳಿಕೆಗಾಗಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್ ಓರ್ವ ಭಿನ್ನಾಣಗಿತ್ತಿ ಎಂದವರು ಕಟಕಿಯಾಡಿದರು. ಸರಕಾರವು ಆಕೆಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಬೇಕೆಂದು ರಾಮ್ ಇಕ್ಬಾಲ್ ಸಿಂಗ್ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News