ರಾಕೇಶ್ ಟಿಕಾಯತ್ ಪ್ರತಿಭಟನೆಯ ಎಚ್ಚರಿಕೆ: ಕಾರ್ಯಕ್ರಮಕ್ಕೆ ಹೋಗದ ಕೇಂದ್ರ ಸಚಿವ ಅಜಯ್ ಮಿಶ್ರಾ

Update: 2021-11-25 08:00 GMT
ಅಜಯ್ ಮಿಶ್ರಾ

ಲಕ್ನೊ: ಲಖಿಂಪುರ ಖೇರಿಯಲ್ಲಿ ಬುಧವಾರ ನಡೆದ ಎರಡು ಸಹಕಾರಿ ಸಕ್ಕರೆ ಕಾರ್ಖಾನೆಗಳ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ (ಗೃಹ) ಅಜಯ್ ಮಿಶ್ರಾ ಅವರು ಭಾಗವಹಿಸಿದರೆ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ  ಹಿನ್ನೆಲೆಯಲ್ಲಿ ಸಚಿವರು ಕಾರ್ಯಕ್ರಮಕ್ಕೆ ಹೋಗದೆ ದೂರವೇ ಉಳಿದರು.

ಜಿಲ್ಲೆಯ ಬೆಳ್ರಾಯಣ ಹಾಗೂ  ಸಂಪೂರ್ಣ ನಗರದಲ್ಲಿ  ಬುಧವಾರ ನಡೆದ ಎರಡೂ ಸಕ್ಕರೆ ಕಾರ್ಖಾನೆಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಮಿಶ್ರಾ ಮುಖ್ಯ ಅತಿಥಿಯಾಗಿರುತ್ತಾರೆ ಎಂದು  ಆಹ್ವಾನ ಪತ್ರಗಳಲ್ಲಿ ಮುದ್ರಿಸಲಾಗಿತ್ತು.

ರವಿವಾರ ಲಕ್ನೋದಲ್ಲಿ ನಡೆದ ಡಿಜಿಪಿ ಹಾಗೂ  ಐಜಿಗಳ ವಾರ್ಷಿಕ ಸಮ್ಮೇಳನದ ಅಂತಿಮ ದಿನದಲ್ಲೂ  ಮಿಶ್ರಾ ಗೈರು ಹಾಜರಾಗಿದ್ದರು.

ಅಕ್ಟೋಬರ್ 3 ರಂದು ನಡೆದ ಲಖಿಂಪುರ ಖೇರಿ ಘಟನೆಯಲ್ಲಿ ಮಿಶ್ರಾ ಅವರ ಪುತ್ರ ಆಶಿಶ್ ಕೊಲೆ ಆರೋಪಿಯಾಗಿದ್ದು, ಸಚಿವರ ಮಾಲೀಕತ್ವದ ವಾಹನ ಸೇರಿದಂತೆ ಸಚಿವರ ಬೆಂಗಾವಲು ವಾಹನ ಪ್ರತಿಭಟನಾಕಾರರ ಗುಂಪಿನತ್ತ ನುಗ್ಗಿ ನಾಲ್ವರ ಕೊಂದಿತ್ತು.

ಸೋಮವಾರ ಲಕ್ನೋದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್‌ನಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಟಿಕಾಯತ್, ಮಿಶ್ರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ, ಎರಡು ಕಾರ್ಖಾನೆಗಳಿಗೆ ಯಾವುದೇ ಕಬ್ಬನ್ನು ತೆಗೆದುಕೊಂಡು ಹೋಗುವುದಿಲ್ಲ ಹಾಗೂ  ರೈತರು ತಮ್ಮ ಉತ್ಪನ್ನಗಳನ್ನು ಲಖಿಂಪುರ ಖೇರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುರಿಯುತ್ತಾರೆ ಎಂದು ಹೇಳಿದ್ದರು.

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ಘೋಷಣೆಯ ನಂತರವೂ ಕೇಂದ್ರ ಸಚಿವ ಮಿಶ್ರಾ ರಾಜೀನಾಮೆ ಸಹಿತ ತಮ್ಮ ಪ್ರಮುಖ ಬೇಡಿಕೆಯೊಂದಿಗೆ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News