ಮಾಂಸಾಹಾರ: ಅದೇನು ಅಷ್ಟೊಂದು ಲಜ್ಜಾಸ್ಪದ ಕಳಂಕವೇ?

Update: 2021-11-26 02:45 GMT

ಯಾರಾದರೂ ಸಸ್ಯಾಹಾರಿಗಳಾಗಿ ಬದುಕಬಯಸಿದ್ದರೆ ಅದು ಖಂಡಿತ ಅವರ ಆಯ್ಕೆ. ಹಾಗೆ ಬದುಕಲು ಅವರಿಗಿರುವ ಹಕ್ಕು ಖಂಡಿತ ಗೌರವಾರ್ಹ. ಆದರೆ ಸಸ್ಯಾಹಾರವನ್ನು ಕರುಣೆಯ ಜೊತೆ ಮತ್ತು ಮಾಂಸಾಹಾರವನ್ನು ಕ್ರೌರ್ಯದ ಜೊತೆ ಜೋಡಿಸಿ ಮಾಂಸಾಹಾರಿಗಳನ್ನು ಹಂಗಿಸುವ ಹಕ್ಕು ಅವರಿಗೆ ಖಂಡಿತ ಇಲ್ಲ. ಅವರ ಆ ವಾದಕ್ಕೆ ಯಾವುದೇ ಆಧಾರವೂ ಇಲ್ಲ. ದಾಸ್ಯಕ್ಕಿಂತ ಕ್ರೂರ ಹಾಗೂ ಅಮಾನುಷವಾದ ಜಾತಿವಾದವನ್ನು ಮತ್ತು ಅದರಲ್ಲೂ ವಿಶೇಷವಾಗಿ ಅಸ್ಪಶ್ಯತೆ ಎಂಬ ಊಹೆಗೆ ಮೀರಿದ ಪರಮ ಕ್ರೌರ್ಯವನ್ನು ಭಾರತದಲ್ಲಿ ಜಾರಿಗೊಳಿಸಿದವರು ಮತ್ತು ಹಲವು ಶತಮಾನಗಳ ಕಾಲ ಮಾತ್ರವಲ್ಲ, ಇಪ್ಪತ್ತೊಂದನೇ ಶತಮಾನದಲ್ಲೂ ಜೀವಂತ ಇಟ್ಟಿರುವವರು ಸಸ್ಯಾಹಾರಿಗಳು. ಅವರಿಗಂತೂ ಸಸ್ಯಾಹಾರವನ್ನು ಕರುಣೆಯ ಪ್ರತೀಕವಾಗಿಸುವ ಯಾವ ಅಧಿಕಾರವೂ ಇಲ್ಲ.

ಮಿಶ್ರ ಸ್ವರೂಪದ ಜನಸಂಖ್ಯೆ ಇರುವ ಸಮಾಜಗಳಲ್ಲಿ ಅಲ್ಲಿನ ಅಲ್ಪಸಂಖ್ಯಾತರು ಬಹುಸಂಖ್ಯಾತರ ಭಾವನೆಗಳ ಬಗ್ಗೆ ತುಂಬಾ ಸಂವೇದನಾಶೀಲವಾಗಿರಬೇಕು ಎಂದು ಪ್ರತಿದಿನವೂ ಎಂಬಂತೆ ಉಪದೇಶಿಸುವ ಒಂದು ಪುಟಾಣಿ ವರ್ಗ ನಮ್ಮ ಸುತ್ತ ಸದಾ ಠಳಾಯಿಸುತ್ತಿರುತ್ತದೆ. ಅವರ ಧಾಟಿ ನೋಡಿದರೆ, ಬಹುಸಂಖ್ಯಾತರು ನಿಮ್ಮನ್ನು ಬದುಕಲು ಬಿಟ್ಟಿರುವುದೇ ಒಂದು ದೊಡ್ಡ ಉಪಕಾರ. ಅದಕ್ಕಾಗಿ ನೀವು ಸದಾ ಅವರಿಗೆ ಋಣಿಗಳಾಗಿರಬೇಕು ಎಂಬಂತಿರುತ್ತದೆ. ಅವರ ಈ ತರ್ಕ ಸರಿ ಎಂದು ಒಪ್ಪುವುದಾದರೆ ಸದ್ಯ ನಮ್ಮ ದೇಶದಲ್ಲಿ ಸಸ್ಯಾಹಾರಿ ಎಂಬೊಂದು ಅಲ್ಪಸಂಖ್ಯಾತ ವರ್ಗದ ಕೆಲವರು ‘ಮಾಂಸಾಹಾರಿ’ ಎಂದು ಗುರುತಿಸಲಾಗುವ ಈ ದೇಶದ ಭಾರೀ ಬಹುಸಂಖ್ಯಾತ ವರ್ಗದ ಭಾವನೆಗಳನ್ನು ಪದೇ ಪದೇ ಘಾಸಿಗೊಳಿಸುತ್ತಿದ್ದಾರೆ ಮತ್ತು ಅವರ ಮೇಲೆ ತಮ್ಮ ಮರ್ಜಿಯನ್ನು ಹೇರುವ ದುಸ್ಸಾಹಸ ಮಾಡುತ್ತಿದ್ದಾರೆ ಎಂಬುದನ್ನೂ ಒಪ್ಪಬೇಕಾಗುತ್ತದೆ. ಇದೀಗ ಸಸ್ಯಾಹಾರಿಗಳು ತಾವೇ ದೇಶದ ಸರಕಾರದ ಸೂತ್ರಧಾರಿಗಳು ಎಂಬ ಭ್ರಮೆಯಲ್ಲಿರುವುದರಿಂದ ಸಸ್ಯಾಹಾರವನ್ನು ಸಮಾಜದ ಮೇಲೆ ಹೇರುವ ತಮ್ಮ ಅಪೇಕ್ಷೆಯನ್ನು ಈಡೇರಿಸಲು ತೀರಾ ಒರಟಾದ, ಸಂವೇದನಾಹೀನ ವಿಧಾನಗಳನ್ನು ಬಳಸತೊಡಗಿದ್ದಾರೆ.

ನಿಜವಾಗಿ ಮಾನವ ಸಮಾಜದ ಯಾವುದೇ ವರ್ಗವನ್ನು ಗುರುತಿಸಲು ‘ಮಾಂಸಾಹಾರಿ’ ಎಂಬ ಪದವನ್ನು ಬಳಸುವುದೇ ಒಂದು ದೊಡ್ಡ ಅನ್ಯಾಯ. ಬದುಕಿನಲ್ಲಿ ಒಮ್ಮೆಯೂ ಮಾಂಸ ತಿನ್ನದೆ, ಯಾವಾಗಲೂ ಕೇವಲ ಸಸ್ಯಾಹಾರವನ್ನು ಮಾತ್ರ ತಿನ್ನುವ ಹೋರಿ, ಕತ್ತೆ ಇತ್ಯಾದಿ ಮುಗ್ಧಪ್ರಾಣಿಗಳನ್ನು ‘ಸಸ್ಯಾಹಾರಿ’ ಎಂದು ಗುರುತಿಸುವಂತೆ, ಎಂದೂ ಸಸ್ಯಾಹಾರದ ಗೊಡವೆಗೆ ಹೋಗದೆ ಸದಾ ಮಾಂಸವನ್ನು ಮಾತ್ರ ತಿನ್ನುವ ಹುಲಿ, ಸಿಂಹ ಇತ್ಯಾದಿಗಳನ್ನು ‘ಮಾಂಸಾಹಾರಿ’ ಎಂದು ಗುರುತಿಸಬಹುದು. ಆದರೆ ಮಾನವರಲ್ಲಿ ಯಾರೂ ಆ ರೀತಿ ಸಸ್ಯಾಹಾರವನ್ನು ಸಂಪೂರ್ಣ ಬಹಿಷ್ಕರಿಸಿ ಮಾಂಸಾಹಾರವನ್ನು ಮಾತ್ರ ಸದಾ ಅವಲಂಬಿಸಿರುವುದಿಲ್ಲ. ‘ಮಾಂಸಾಹಾರಿ’ ಎಂದು ಗುರುತಿಸಲಾಗುವ ಜನರಲ್ಲಿ ಕೂಡಾ ಹೆಚ್ಚಿನವರು ವರ್ಷದಲ್ಲಿ ಹೆಚ್ಚಿನ ದಿನ ಸಸ್ಯಾಹಾರವನ್ನೇ ಭಕ್ಷಿಸುತ್ತಾರೆ. ಎಂದಾದರೊಮ್ಮೆ ಮಾತ್ರ ಮಾಂಸ ತಿನ್ನುತ್ತಾರೆ. ಆ ಮಾಂಸದ ಜೊತೆಗೂ ಸಸ್ಯ, ತರಕಾರಿಯ ಖಾದ್ಯಗಳಿರುತ್ತವೆ. ಈ ರೀತಿ ಅಪರೂಪಕ್ಕೆ ಮಾತ್ರ ಒಂದಿಷ್ಟು ಮಾಂಸ ತಿನ್ನುವವರನ್ನು ಸಾರಾಸಗಟಾಗಿ ‘ಮಾಂಸಾಹಾರಿ’ ಎಂದು ಗುರುತಿಸುವುದರಲ್ಲಿ ಯಾವ ನ್ಯಾಯವಿದೆ? ಹಾಗೆಯೇ ನಿತ್ಯ ಮಾಂಸ ತಿಂದರೂ ಅದರ ಜೊತೆ ತಪ್ಪದೆ ಸಸ್ಯ ತರಕಾರಿ, ಹಣ್ಣು ಹಂಪಲು ಇತ್ಯಾದಿಗಳನ್ನು ತಿನ್ನುವ ಮಂದಿಯನ್ನು ಕೂಡಾ ಹುಲಿ, ಸಿಂಹಗಳೋ ಎಂಬಂತೆ ಅನಾಮತ್ತಾಗಿ ಮಾಂಸಾಹಾರಿ ಎಂಬ ವರ್ಗಕ್ಕೆ ಸೇರಿಸಿ ಬಿಡುವುದು ಎಷ್ಟು ಸರಿ? ಅವರು ತಿನ್ನುವ ಸಸ್ಯ, ಫಲ ಪುಷ್ಪಇತ್ಯಾದಿಗಳಿಗೇನು ಯಾವ ಮಾನ್ಯತೆಯೂ ಇಲ್ಲವೇ?

ಸಸ್ಯಾಹಾರವೇ ಮಾನವ ಜೀವಿಗಳ ಸ್ವಾಭಾವಿಕ ಆಹಾರ ಎಂದು ಕೆಲವು ಸಸ್ಯಹಂತಕರು ವಾದಿಸುವುದುಂಟು.ಹಿಂದೂ ಸಮಾಜ ಎಂಬ ಒಂದೆ ಸಮುದಾಯದಲ್ಲಿ ಕೆಲವು ತೀವ್ರವಾದಿ ಸಸ್ಯಾಹಾರಿಗಳು ಹಿಂದೂ ಸಮಾಜದ ಮಾಂಸಾಹಾರಿಗಳ ಕುರಿತು ತೀರಾ ತಾತ್ಸಾರದಿಂದ ಮಾತನಾಡುತ್ತಾರೆ. ಅವರ ಇತರ ಹಲವು ವಾದಗಳಂತೆ ಇದು ಕೂಡಾ ಹುರುಳಿಲ್ಲದ ವಾದ. ದನ, ಕತ್ತೆ, ಕುದುರೆ ಇತ್ಯಾದಿ ಪ್ರಾಣಿಗಳ ವಿಷಯದಲ್ಲಿ, ಸಸ್ಯವೇ ಅವರ ಸ್ವಾಭಾವಿಕ ಹಾಗೂ ಪ್ರಕೃತಿ ಸಹಜ ಆಹಾರ ಎಂದು ವಾದಿಸಬಹುದು. ಏಕೆಂದರೆ ಮಾಂಸಾಹಾರವು ಈ ಪ್ರಾಣಿಗಳಿಗೆ ಕ್ಷಣಮಾತ್ರಕ್ಕೂ ಒಗ್ಗುವುದಿಲ್ಲ. ಅವುಗಳಿಗೆ ಬಲವಂತವಾಗಿ ಮಾಂಸ ತಿನ್ನಿಸಿದರೂ ಅವು ತಕ್ಷಣ ಗಂಭೀರವಾಗಿ ಅಸ್ವಸ್ಥವಾಗಿ ಬಿಡುತ್ತವೆ. ಆದರೆ ಮಾನವರು ಭೂಮುಖದಲ್ಲಿ ತಮ್ಮ ಸೃಷ್ಟಿಯ ಆರಂಭದಿಂದಲೇ, ಮಾಂಸ ತಿನ್ನುತ್ತಿದ್ದಾರೆ ಮತ್ತು ಸ್ವಸ್ಥರಾಗಿದ್ದಾರೆ. ಹೆಚ್ಚಿನ ಮಾಂಸಾಹಾರಿಗಳು ಸಸ್ಯಾಹಾರಿಗಳಿಗಿಂತಲೂ ಸ್ವಸ್ಥ ಹಾಗೂ ಬಲಿಷ್ಠರಾಗಿದ್ದಾರೆ. ಪ್ರಾಕೃತಿಕವಾಗಿ ಮಾನವರು ಮಿಶ್ರಾಹಾರಿಗಳೇ ಹೊರತು ಶುದ್ಧ ಸಸ್ಯಾಹಾರಿಗಳೇನೂ ಅಲ್ಲವೆಂಬುದಕ್ಕೆ ಬೇರಾವ ಪುರಾವೆ ಬೇಕು?

ದೂಷಣೆಯನ್ನೇ ಆತ್ಮಶಾಂತಿಯ ಉಪಾಧಿಯಾಗಿಸಿಕೊಂಡಿರುವ ಕೆಲವು ಮಂದಿ ಮಾಂಸಾಹಾರವನ್ನು ಕ್ರೌರ್ಯವೆಂಬಂತೆ ಚಿತ್ರಿಸುತ್ತಾರೆ. ನಿಜವಾಗಿ ಮೃಗ ಸಂಹಾರವಾಗಲಿ ಮತ್ಸ್ಯ ಸಂಹಾರವಾಗಲಿ ಸಸ್ಯ ಸಂಹಾರಕ್ಕಿಂತ ಹೆಚ್ಚು ಕ್ರೂರ ಎನ್ನುವುದಕ್ಕೆ ತಾರ್ಕಿಕ ಸಮರ್ಥನೆಯೇನೂ ಇಲ್ಲ. ಮಾನವರಲ್ಲಿ ಆತ್ಮವಿದೆ, ಸಸ್ಯಗಳಲ್ಲಿ ಇಲ್ಲ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಮಾನವರಿರಲಿ, ಮೃಗಗಳಿರಲಿ, ಮತ್ಸ್ಯಗಳಿರಲಿ, ಪಕ್ಷಿಗಳಿರಲಿ, ಸಸ್ಯ, ವೃಕ್ಷಗಳಿರಲಿ, ಬಳ್ಳಿಗಳಿರಲಿ, ಫಲ, ಪುಷ್ಪ, ಧಾನ್ಯಗಳಿರಲಿ, ಹಣ್ಣುಹಂಪಲುಗಳಿರಲಿ ಅವೆಲ್ಲವುಗಳಲ್ಲೂ ಜೀವ ಇದೆ ಮತ್ತು ತಮ್ಮಲ್ಲಿ ಜೀವ ಇದೆ ಎಂಬ ಕಾರಣಕ್ಕಾಗಿಯೇ ಅವು ತಮ್ಮನ್ನು ತಿನ್ನುವ ಜೀವಿಗಳ ಜೀವಕ್ಕೆ ಶಕ್ತಿ ಒದಗಿಸುತ್ತವೆ ಎಂಬುದರಲ್ಲಿ ಯಾರಿಗೂ ಸಂದೇಹವಿಲ್ಲ. ಈ ದೃಷ್ಟಿಯಿಂದ ಆಹಾರಕ್ಕಾಗಿ ಸಸ್ಯಗಳನ್ನು ಸಂಹರಿಸುವುದು ಯಾವುದೇ ಪ್ರಾಣಿಯನ್ನು ಸಂಹರಿಸುವುದಕ್ಕಿಂತ ಕಡಿಮೆ ಕ್ರೂರ ಕೃತ್ಯವೇನೂ ಅಲ್ಲ. ಆಹಾರಕ್ಕಾಗಿ, ಮಾತು ಬಾರದ ಮೂಕ ಪ್ರಾಣಿಗಳನ್ನು ಕೊಲ್ಲುವುದು ಕ್ರೌರ್ಯವೆಂದಾದರೆ, ಬಾಯಿ ಮಾತ್ರವಲ್ಲ, ಕಣ್ಣು, ಕಿವಿ, ಮೂಗು, ಕೈ ಕಾಲು ಯಾವುದೂ ಇಲ್ಲದ ಬಡಪಾಯಿ ಸಸ್ಯಗಳನ್ನು ಕೊಲ್ಲುವುದು ಇನ್ನಷ್ಟು ದೊಡ್ಡ ಪರಮ ಕ್ರೌರ್ಯವಲ್ಲವೇ?

ಕೆಲವು ತೀವ್ರವಾದಿ ಭಾವುಕ ಸಸ್ಯಾಹಾರಿಗಳು ಭಾರತವೆಂದರೆ ಸಸ್ಯಾಹಾರಿಗಳದ್ದೇ ದೇಶ ಎಂಬಂತೆ ಮಾತನಾಡುವುದುಂಟು. ಸ್ವಾಮ್ಯ ಸ್ಥಾಪನೆಯ ಈ ಪೆದ್ದು ಶ್ರಮವು ಮೂರ್ಖರ ಮಧ್ಯೆ ಯಶಸ್ವಿಯಾದರೂ, ಒಂದಷ್ಟು ವಿದ್ಯಾವಂತರು ಇರುವಲ್ಲೆಲ್ಲಾ ಹಾಸ್ಯಾಸ್ಪದವಾಗಿ ಬಿಡುತ್ತದೆ. ಭಾರತದಲ್ಲಿ ಸರಕಾರಿ ಅಂಕೆ-ಸಂಖ್ಯೆಗಳನ್ನು ನಿಭಾಯಿಸುವವರು ಸಸ್ಯ ಸಂಹಾರಿ ಸಸ್ಯಾಹಾರಿಗಳ ಮೇಲೆ ಕೃಪೆ ತೋರಲಿಕ್ಕೆಂದೇ ಸಸ್ಯಾಹಾರಿ ಜನಸಂಖ್ಯೆಯನ್ನು ತೀರಾ ಉತ್ಪ್ರೇಕ್ಷಿತ ರೂಪದಲ್ಲಿ ಮುಂದಿಡುತ್ತಾ ಬಂದಿದ್ದಾರೆ. ಆದರೆ ಎಷ್ಟು ಉತ್ಪ್ರೇಕ್ಷಿಸಿದರೂ ದೇಶದ ಸಸ್ಯಾಹಾರಿಗಳ ಸಂಖ್ಯೆಯನ್ನು ಶೇ.37ಕ್ಕಿಂತ ಹೆಚ್ಚಿಸಿ ತೋರಿಸಲು ಅವರಿಗೆ ಸಾಧ್ಯವಾಗಿಲ್ಲ. ಆದರೆ 2018ರಲ್ಲಿ ಅಮೆರಿಕದ ವಿಲಿಯಮ್ ಪೀಟರ್ಸನ್ ವಿಶ್ವವಿದ್ಯಾನಿಲಯದ ಬಾಲಮುರಳಿ ನಟರಾಜನ್ ಮತ್ತು ಭಾರತದ ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಸೂರಜ್ ಜೇಕಬ್ ಅವರು ಜಂಟಿಯಾಗಿ ನಡೆಸಿದ ಅಧ್ಯಯನವೊಂದು ಈ ಸರಕಾರಿ ಲೆಕ್ಕಾಚಾರದ ಪೊಳ್ಳುತನವನ್ನು ಬಹಿರಂಗ ಪಡಿಸಿದೆ. ವಿವಿಧ ಅಧಿಕೃತ ಸರಕಾರಿ ದಾಖಲೆಗಳ ಸಹಿತ ನೂರಾರು ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳ ಸವಿಸ್ತಾರ ಸಂಶೋಧನೆ ಮತ್ತು ವಿಶ್ಲೇಷಣೆಯ ಮೂಲಕ ನಡೆಸಲಾದ ಈ ಅಧ್ಯಯನದಲ್ಲಿ, ಭಾರತದಲ್ಲಿ ಕಟ್ಟುನಿಟ್ಟಿನ ಸಸ್ಯಾಹಾರಿಗಳ ಸಂಖ್ಯೆ ಯಾವ ಕಾರಣಕ್ಕೂ ಶೇ. 20ಕ್ಕಿಂತ ಹೆಚ್ಚಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಹಾಗೆಯೇ ಭಾರತದಲ್ಲಿ ಬೀಫ್ ಭಕ್ಷಕರ ಸಂಖ್ಯೆ ಶೇ. 7ಕ್ಕಿಂತ ಅಧಿಕವಿಲ್ಲ ಎಂಬ ಸರಕಾರಿ ಮಾಹಿತಿಯನ್ನು ತಳ್ಳಿ ಹಾಕಿರುವ ಈ ಅಧ್ಯಯನದಲ್ಲಿ, ಅವರ ಸಂಖ್ಯೆ ಶೇ.15ಕ್ಕಿಂತ ಕಡಿಮೆಯೇನೂ ಇಲ್ಲ ಎಂಬುದನ್ನು ಸಿದ್ಧಪಡಿಸಲಾಗಿದೆ.

ಸಸ್ಯಾಹಾರಿ ಎಂಬ ಕಿರೀಟ ಹೊತ್ತು ನಡೆಯುವವರ ಒಂದು ಸಮಸ್ಯೆ ಎಂದರೆ, ಯಾರು ಸಸ್ಯಾಹಾರಿ ಎಂಬ ಮೂಲಭೂತ ಪ್ರಶ್ನೆಗೂ ಈ ತನಕ ಅಂತಿಮ ಉತ್ತರ ಸಿಕ್ಕಿಲ್ಲ. ವೆಜಿಟೇರಿಯನ್ ಎಂಬ ಪದ ಮತ್ತು ವೇಗನ್ ಎಂಬ ಪದದ ವಿಶ್ಲೇಷಣೆಯ ಕುರಿತಂತೆ ಜಾಗತಿಕ ಮಟ್ಟದಲ್ಲೇ ಭಾರೀ ಚರ್ಚೆ ಇದೆ. ಈರುಳ್ಳಿ, ಬೆಳ್ಳುಳ್ಳಿಗಳನ್ನು ತಿನ್ನಬಹುದೇ ಎಂಬ ಬಗ್ಗೆ ವಿವಾದಗಳಿವೆ. ಅಣಬೆ ಸಸ್ಯವೇ ಅಥವಾ ಜೀವವುಳ್ಳ ಶಿಲೀಂಧ್ರ (Fungi)ವೇ? ಎಂಬ ಬಗ್ಗೆ ಪ್ರಶ್ನೆಗಳಿವೆ. ಕೆಲವು ಮಂದಿ ಮೀನು, ಮೊಟ್ಟೆ ತಿನ್ನುತ್ತಲೂ ತಾವು ಸಸ್ಯಾಹಾರಿಗಳೆಂದೇ ಹೇಳಿಕೊಳ್ಳುವುದುಂಟು. ಸಸ್ಯಾಹಾರಿಗಳು ಮತ್ಸ್ಯ, ಮಾಂಸಗಳ ಭಕ್ಷಣೆಯನ್ನು ವರ್ಜಿಸಿದರೂ ಜೀವಿಗಳ ಮೂಲದಿಂದಲೇ ಬರುವ ಚರ್ಮ, ರೇಷ್ಮೆ ಇತ್ಯಾದಿಗಳ ಉತ್ಪನ್ನಗಳನ್ನು ಧಾರಾಳ ಬಳಸುತ್ತಾರೆ. ವೇಗನ್‌ಗಳು ಇವುಗಳ ಬಳಕೆಯನ್ನೂ ಕ್ರೌರ್ಯ ಎಂದು ಬಣ್ಣಿಸುತ್ತಾರೆ. ಆದರೆ ಅವರು ಹಾಲು, ಕೆನೆ, ಬೆಣ್ಣೆ, ತುಪ್ಪ ಇತ್ಯಾದಿಗಳನ್ನು ಬಳಸುತ್ತಾರೆ. ಇವೆಲ್ಲ ಸಸ್ಯ ಮೂಲದಿಂದ ಬರುವ ಆಹಾರಗಳೇನಲ್ಲ. ಈ ವಸ್ತುಗಳ ಉತ್ಪಾದನೆಯಲ್ಲಿ ಯಾವುದೇ ಜೀವಿಯ ಹತ್ಯೆಯ ಪ್ರಕ್ರಿಯೆ ಒಳಗೊಂಡಿಲ್ಲ ಎಂಬುದು ಅವರ ತರ್ಕ. ನಿಜವಾಗಿ, ಹಾಲನ್ನು ಒದಗಿಸುವ ಪ್ರಾಣಿಗಳ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು, ಸ್ವಲ್ಪಸಂವೇದನಾಶೀಲರಾಗಿ ನೋಡಿದರೆ ದನಗಳಾಗಲಿ ಕುರಿಗಳಾಗಲಿ ಹಾಲು ಉತ್ಪಾದಿಸುವುದು ತಮ್ಮ ಸಂತಾನಗಳಿಗಾಗಿಯೇ ಹೊರತು ಮಾನವರ ಹೊಟ್ಟೆ ತುಂಬಿಸಲಿಕ್ಕಲ್ಲ. ಅಂತಹ ಪ್ರಾಣಿಗಳ ಹಾಲನ್ನು ಕಿತ್ತುಕೊಂಡು ಅವುಗಳ ಮುಗ್ಧ ಸಂತತಿಗಳನ್ನು ವಂಚಿಸುವುದು ಕ್ರೌರ್ಯವೇ ಹೊರತು ಔದಾರ್ಯವೇನಲ್ಲ.

ಸಸ್ಯಾಹಾರದ ಪ್ರತಿಪಾದಕರು ಸಾಮಾನ್ಯವಾಗಿ ಸಸ್ಯಾಹಾರದಿಂದಾಗುವ ಲಾಭಗಳ ಭಾರೀ ಉದ್ದ ಪಟ್ಟಿಯೊಂದನ್ನು ಅಭಿಮಾನದೊಂದಿಗೆ ಹೊತ್ತು ನಡೆಯುವುದುಂಟು. ಆದರೆ ಅವರು ಒಂದು ವಿಷಯವನ್ನು ಗಮನಿಸಬೇಕು. ಸಸ್ಯಾಹಾರಿಗಳು ತಿನ್ನುವ ಎಲ್ಲ ತರಕಾರಿಗಳನ್ನು ಮತ್ತು ಫಲಪುಷ್ಪಗಳನ್ನು ಮಾಂಸಾಹಾರಿಗಳು ಧಾರಾಳವಾಗಿ ತಿನ್ನುತ್ತಾರೆ, ಮಾತ್ರವಲ್ಲ, ನಿತ್ಯ ಹಲವು ಬಾರಿ ತಿನ್ನುತ್ತಾರೆ. ಒಂದು ಪ್ಲೇಟ್ ಬಿರಿಯಾನಿಯಲ್ಲಿ ಶೇ.10 ಮಾಂಸವಿದ್ದರೆ ಶೇ.90 ಅಕ್ಕಿ ಇರುತ್ತದೆ. ಆದ್ದರಿಂದ ಮಾಂಸಾಹಾರಿಗಳು ಸಸ್ಯಾಹಾರದ ಯಾವುದೇ ಲಾಭದಿಂದ ವಂಚಿತರಾಗಿರುವುದಿಲ್ಲ. ಅದೇ ವೇಳೆ ಮಾಂಸಾಹಾರದಲ್ಲಿರುವ ಅನೇಕ ಲಾಭಗಳಿಂದ ಸಸ್ಯಾಹಾರಿಗಳು ಸಂಪೂರ್ಣ ವಂಚಿತರಾಗಿರುತ್ತಾರೆ. ಒಂದುವೇಳೆ ಮಾಂಸಾಹಾರಿಗಳು ಮಾಂಸಾಹಾರದ ಪ್ರಯೋಜನಗಳನ್ನು ಎಣಿಸತೊಡಗಿದರೆ ಅವರ ಪಟ್ಟಿ ಕೂಡಾ ಸಣ್ಣದೇನೂ ಆಗಿರುವುದಿಲ್ಲ. ಒಲಿಂಪಿಕ್‌ನಂತಹ, ಶಾರೀರಿಕ ಸಾಮರ್ಥ್ಯದ ಕಠಿಣ ಪರೀಕ್ಷೆಯಲ್ಲಿ ಪಾಸಾದವರ ಮತ್ತು ದಾಖಲೆ ನಿರ್ಮಿಸಿದವರ ಪೈಕಿ ಸಸ್ಯಾಹಾರಿಗಳ ಸಂಖ್ಯೆ ತೀರಾ ಕಡಿಮೆ.ಇನ್ನು ಸಸ್ಯಾಹಾರವು ಬುದ್ಧಿಯ ಬೆಳವಣಿಗೆಗೆ ತುಂಬಾ ಸಹಾಯಕ ಎನ್ನುವುದು ಕೂಡಾ ಅಂತಹ ಬಲಿಷ್ಠ ವಾದವೇನೂ ಇಲ್ಲ. ಏಕೆಂದರೆ ಬುದ್ಧಿ, ಜಾಣ್ಮೆ ಇತ್ಯಾದಿ ರಂಗಗಳಲ್ಲಿ ವಿಶ್ವಮಟ್ಟದಲ್ಲಿ ಪ್ರಖ್ಯಾತರಾದ ಅಸಾಮಾನ್ಯ ಪ್ರತಿಭಾಶಾಲಿ ವಿಜ್ಞಾನಿಗಳು, ಕವಿಗಳು, ಸಾಹಿತಿಗಳು, ಕಲಾವಿದರು ಮತ್ತು ದಾರ್ಶನಿಕರ ಸಂಖ್ಯೆಯಲ್ಲೂ ಮಾಂಸಾಹಾರಿಗಳ ಪ್ರಾತಿನಿಧ್ಯ ಸಸ್ಯಾಹಾರಿಗಳಿಗೆ ಹೋಲಿಸಿದರೆ ತುಂಬಾ ಅಧಿಕವಿದೆ. ಶಾರೀರಿಕ ಸಾಮರ್ಯ್ವನ್ನು ಅಳೆಯಲು ಒಲಿಂಪಿಕ್ ಅನ್ನು ಮಾನದಂಡವಾಗಿ ಬಳಸಿದಂತೆ, ಬೌದ್ಧಿಕರಂಗದಲ್ಲಿ ನೊಬೆಲ್ ಅನ್ನು ಮಾನದಂಡವಾಗಿ ಬಳಸಿ ಯಾರ ಸಾಮರ್ಥ್ಯ ಎಷ್ಟೆಂಬುದನ್ನು ಅಳೆಯ ಬಹುದು.

ಸಸ್ಯಾಹಾರ ಅಥವಾ ಮಾಂಸಾಹಾರದ ಲಾಭ ನಷ್ಟಗಳನ್ನು ನಾವು ವಿಸ್ತಾರವಾಗಿ ಚರ್ಚಿಸಬಹುದು. ಯಾರಾದರೂ ಸಸ್ಯಾಹಾರಿಗಳಾಗಿ ಬದುಕಬಯಸಿದ್ದರೆ ಅದು ಖಂಡಿತ ಅವರ ಆಯ್ಕೆ. ಹಾಗೆ ಬದುಕಲು ಅವರಿಗಿರುವ ಹಕ್ಕು ಖಂಡಿತ ಗೌರವಾರ್ಹ. ಆದರೆ ಸಸ್ಯಾಹಾರವನ್ನು ಕರುಣೆಯ ಜೊತೆ ಮತ್ತು ಮಾಂಸಾಹಾರವನ್ನು ಕ್ರೌರ್ಯದ ಜೊತೆ ಜೋಡಿಸಿ ಮಾಂಸಾಹಾರಿಗಳನ್ನು ಹಂಗಿಸುವ ಹಕ್ಕು ಅವರಿಗೆ ಖಂಡಿತ ಇಲ್ಲ. ಅವರ ಆ ವಾದಕ್ಕೆ ಯಾವುದೇ ಆಧಾರವೂ ಇಲ್ಲ. ಸಸ್ಯಾಹಾರವನ್ನು ಅಹಿಂಸೆಯ ಜೊತೆ ಗಂಟು ಹಾಕುವವರು ಅಹಿಂಸೆಯ ಪರಮ ಪ್ರತಿಪಾದಕರಾಗಿದ್ದ   ಮಹಾತ್ಮ ಗಾಂಧಿಯವರ ಹಂತಕ ಗೋಡ್ಸೆ ಒಬ್ಬ ಕಟ್ಟಾ ಸಸ್ಯಾಹಾರಿಯಾಗಿದ್ದ ಎನ್ನುವುದನ್ನು ಮರೆಯಬಾರದು. ದಾಸ್ಯಕ್ಕಿಂತ ಕ್ರೂರ ಹಾಗೂ ಅಮಾನುಷವಾದ ಜಾತಿವಾದವನ್ನು ಮತ್ತು ಅದರಲ್ಲೂ ವಿಶೇಷವಾಗಿ ಅಸ್ಪೃಶ್ಯತೆ ಎಂಬ ಊಹೆಗೆ ಮೀರಿದ ಪರಮ ಕ್ರೌರ್ಯವನ್ನು ಭಾರತದಲ್ಲಿ ಜಾರಿಗೊಳಿಸಿದವರು ಮತ್ತು ಹಲವು ಶತಮಾನಗಳ ಕಾಲ ಮಾತ್ರವಲ್ಲ, ಇಪ್ಪತ್ತೊಂದನೇ ಶತಮಾನದಲ್ಲೂ ಜೀವಂತ ಇಟ್ಟಿರುವವರು ಸಸ್ಯಾಹಾರಿಗಳು. ಅವರಿಗಂತೂ ಸಸ್ಯಾಹಾರವನ್ನು ಕರುಣೆಯ ಪ್ರತೀಕವಾಗಿಸುವ ಯಾವ ಅಧಿಕಾರವೂ ಇಲ್ಲ. ಇಂದು ದೇಶದಲ್ಲಿ ದ್ವೇಷ, ಅಸಹಿಷ್ಣುತೆ, ಕೋಮುವಾದ, ಜಾತಿವಾದ, ಜನಾಂಗವಾದ, ಹಿಂಸೆ, ಗಲಭೆ ಇತ್ಯಾದಿ ತಾಮಸಿಕ ಚಟುವಟಿಕೆಗಳನ್ನು ಬಹಿರಂಗವಾಗಿ ಪ್ರೋತ್ಸಾಹಿಸುತ್ತಿರುವವರ ಸಾಲಲ್ಲಿ ಅನೇಕ ಶುದ್ಧ ಸಸ್ಯಾಹಾರಿಗಳು ಎದ್ದು ಕಾಣುತ್ತಾರೆ. ಈ ರೀತಿ ಪ್ರಾಣಿಗಳ ಪಾಲಿಗೆ ದಯಾಳುಗಳಾಗಿ ಮಾನವರ ಪಾಲಿಗೆ ಕಟುಕರಾಗಿ ಬಿಡುವುದು ಯಾವ ಸೀಮೆಯ ಸಾತ್ವಿಕತೆ? ನಿಜಕ್ಕೂ ಕರುಣೆಯೇ ಅವರ ಸಸ್ಯಾಹಾರದ ಹಿಂದಿನ ಪ್ರೇರಣೆಯಾಗಿದ್ದರೆ ಅವರು ಸಮಾಜದಲ್ಲಿ ಶಾಂತಿ, ಸಹನೆ, ಸಂಯಮದಂತಹ ಮೌಲ್ಯಗಳನ್ನು ಜನಪ್ರಿಯಗೊಳಿಸುವ ಶ್ರಮದಲ್ಲಿ ನಿರತರಾಗಿರಬೇಕಿತ್ತು. ಸಮಾಜದ ವಿವಿಧ ವರ್ಗಗಳ ಮೇಲೆ ನಿತ್ಯವೂ ನಡೆಯುತ್ತಿರುವ ವಿವಿಧ ಬಗೆಯ ಕ್ರೌರ್ಯ, ಶೋಷಣೆ, ಅನ್ಯಾಯ, ಅತ್ಯಾಚಾರ, ಇತ್ಯಾದಿಗಳ ವಿರುದ್ಧ ಹೋರಾಟನಿರತರಾಗಿರಬೇಕಿತ್ತು.

Writer - ಎ.ಎಸ್. ಪುತ್ತಿಗೆ

contributor

Editor - ಎ.ಎಸ್. ಪುತ್ತಿಗೆ

contributor

Similar News