ಮತಾಂತರವು ವ್ಯಕ್ತಿಯ ಜಾತಿಯನ್ನು ಬದಲಾಯಿಸುವುದಿಲ್ಲ: ಮದ್ರಾಸ್ ಹೈಕೋರ್ಟ್

Update: 2021-11-26 09:15 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಒಬ್ಬ ವ್ಯಕ್ತಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡಾಗ ಆತನ ಜಾತಿ ಬದಲಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತನ್ನ ನವೆಂಬರ್ 17ರ ಆದೇಶದಲ್ಲಿ ತಿಳಿಸಿದೆ.

ಹಿಂದು ಅರುಂತತಿಯರ್ ಸಮುದಾಯದ ಯುವತಿಯನ್ನು ವಿವಾಹವಾಗಿದ್ದ ಆದಿ ದ್ರಾವಿಡರ್ ಸಮುದಾಯದ ಎಸ್ ಪೌಲ್ ರಾಜ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶ ಎಸ್ ಎಂ ಸುಬ್ರಮಣಿಯಂ ಮೇಲಿನಂತೆ ಹೇಳಿದ್ದಾರೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಇಬ್ಬರ ಸಮುದಾಯಗಳೂ ಪರಿಶಿಷ್ಟ ಜಾತಿ ವಿಭಾಗದಲ್ಲಿ ಬರುತ್ತದೆ.

ರಾಜ್ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಾಗ ಆತನಿಗೆ ಹಿಂದುಳಿದ ವರ್ಗಗಳ ಜಾತಿ ಪ್ರಮಾಣಪತ್ರವನ್ನು ವಿತರಿಸಲಾಗಿತ್ತು. ಇದೇ ಆಧಾರದಲ್ಲಿ ಆತ ಅಂತರ್ಜಾತೀಯ ವಿವಾಹ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದ.

ತಮಿಳುನಾಡಿನಲ್ಲಿ ಪರಿಶಿಷ್ಟ ಜಾತಿ/ವರ್ಗದವರೊಬ್ಬರು ಇನ್ನೊಂದು ಸಮುದಾಯದವರನ್ನು ವಿವಾಹವಾದರೆ ಅಥವಾ ಹಿಂದುಳಿದ ವರ್ಗದವರು ಇನ್ನೊಂದು ಸಮುದಾಯವರನ್ನು ವಿವಾಹವಾದರೆ ಅದನ್ನು ಅಂತರ್ಜಾತೀಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ವಿವಾಹವಾದವರು ಸರಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗುತ್ತಾರೆ ಹಾಗೂ ಸರಕಾರಿ ಉದ್ಯೋಗಗಳನ್ನೂ ಅವರಿಗೆ ಆದ್ಯತೆ ದೊರೆಯುತ್ತದೆ.

ಆದರೆ ರಾಜ್ ಗೆ ಅಂತರ್ಜಾತೀಯ ವಿವಾಹ ಪ್ರಮಾಣ ಪತ್ರ ನೀಡಲು ಸೇಲಂ ಜಿಲ್ಲೆಯ ಅಧಿಕಾರಿಗಳು ನಿರಾಕರಿಸಿದ್ದರಲ್ಲದೆ ದಂಪತಿಗಳಿಬ್ಬರೂ ಹುಟ್ಟಿನಿಂದ ಪರಿಶಿಷ್ಟ ವರ್ಗದವರಾಗಿರುವುದು ಇದಕ್ಕೆ ಕಾರಣ ಎಂದಿದ್ದರು. ಈ ಹಿನ್ನೆಲೆಯಲ್ಲಿ ಆತ ಅಂತರ್ಜಾತೀಯ ವಿವಾಹ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು.

ಆದರೆ ಮತಾಂತರಗೊಂಡ ಹಿನ್ನೆಲೆಯಲ್ಲಿ ಒದಗಿಸಲಾದ ಜಾತಿ ಪ್ರಮಾಣಪತ್ರದ ಆಧಾರದಲ್ಲಿ ಅಂತರ್ಜಾತೀಯ ವಿವಾಹ ಪ್ರಮಾಣಪತ್ರ ನೀಡಬೇಕೆಂದೇನಿಲ್ಲ ಎಂದು ಸರಕಾರದ ಪರ ವಕೀಲರು ವಾದಿಸಿದ್ದರು.

ನ್ಯಾಯಾಲಯವು ರಾಜ್ ಅರ್ಜಿಯನ್ನು ವಜಾಗೊಳಿಸಿ ಸೇಲಂ ಅಧಿಕಾರಿಗಳು ಅಂತರ್ಜಾತೀಯ ವಿವಾಹ ಪ್ರಮಾಣಪತ್ರ ನೀಡಲು ನಿರಾಕರಿಸಿದ ಕ್ರಮವನ್ನು ಎತ್ತಿ ಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News