ಬೋಳಾರ: ಯುನಿವೆಫ್ ನಿಂದ ಸೀರತ್ ಸಮಾವೇಶ

Update: 2021-11-27 03:41 GMT

ಮಂಗಳೂರು, ನ.27: ಯುನಿವೆಫ್ ಕರ್ನಾಟಕ  ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಮೂರನೇ ಸಾರ್ವಜನಿಕ ಸಭೆಯು ಬೋಳಾರದ ಶಾದಿಮಹಲ್ ನಲ್ಲಿ ಜರುಗಿತು.

"ಜಗತ್ತನ್ನು ಬದಲಿಸಿದ ವಿಶ್ವನಾಯಕ ಪ್ರವಾದಿ (ಸ.)" ಎಂಬ ವಿಷಯದಲ್ಲಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ವೈಚಾರಿಕ ಗುಲಾಮಗಿರಿಯ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಪ್ರವಾದಿ ಮುಹಮ್ಮದ್ (ಸ.) ಮನುಷ್ಯನ ಬಂಧನಗಳನ್ನು ಕಳಚಿ ಸಾಮಾಜಿಕವಾಗಿಯೂ ವೈಚಾರಿಕವಾಗಿಯೂ ಸ್ವತಂತ್ರಗೊಳಿಸಿದರು. ವಿರೋಧಿಗಳಿಗೆ ಪ್ರವಾದಿಯ ಧಾರ್ಮಿಕ ಕ್ರಾಂತಿಯ ಬಗ್ಗೆ ಯಾವುದೇ ಆಕ್ಷೇಪಗಳಿರಲಿಲ್ಲ. ಆದರೆ ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನಿಲುವು ವಿರೋಧಿಗಳ ಹುಬ್ಬೇರಿಸಿತು. ಇಂದೂ ಮುಸ್ಲಿಮರು ತಮ್ಮ ಧಾರ್ಮಿಕ ನಿಲುವಿಗಾಗಿ ದೌರ್ಜನ್ಯಕ್ಕೊಳಗಾಗುತ್ತಿಲ್ಲ. ಬದಲಾಗಿ ಇಸ್ಲಾಮಿನ ಸಾಮಾಜಿಕ ಸಮಾನತೆಯ ತತ್ವವನ್ನು, ರಾಜಕೀಯದಲ್ಲಿ ಧರ್ಮವನ್ನು ಇಲ್ಲಿನ ಕುಲೀನ ಮನಸ್ಥಿತಿಗಳು ಒಪ್ಪದ ಕಾರಣಕ್ಕಾಗಿ ಇಂದು ಮುಸ್ಲಿಮರ ದಮನವಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಯಾವುದೇ ಅಡೆತಡೆಗಳಿಗೂ ಜಗ್ಗದೆ ಕೊನೆತನಕ ತನ್ನ ಆದರ್ಶದಲ್ಲಿ ಸ್ಥಿರವಾಗಿ ನಿಲ್ಲುವ ಒಂದು ಗುಂಪಿನ ಸುವಾರ್ತೆಯನ್ನು ಪ್ರವಾದಿ ನೀಡಿದ್ದರು. ಯುನಿವೆಫ್ ಕರ್ನಾಟಕ ಪ್ರವಾದಿಯ ಆ ಸುವಾರ್ತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಹಿಲ್ ಸಯೀದ್ ಕಿರಾಅತ್ ಪಠಿಸಿದರು. ಮೋನು ಬೋರ್ಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಯು.ಕೆ.ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಸೈಫುದ್ದೀನ್, ಸಂಚಾಲಕ ವಕಾಝ್ ಅರ್ಶಲನ್, ಮಂಗಳೂರು ಶಾಖಾಧ್ಯಕ್ಷ ತಾಯಿಫ್ ಅಹ್ಮದ್ ರಹ್ಮಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News