ಕೂಳೂರು, ಕೋಡಿಕಲ್ ನಾಗಬನ ಧ್ವಂಸ ಪ್ರಕರಣ: ಎಂಟು ಮಂದಿ ಆರೋಪಿಗಳ ಬಂಧನ

Update: 2021-11-27 08:29 GMT

ಮಂಗಳೂರು, ನ.27: ನಗರದ ಕೋಡಿಕಲ್ ಮತ್ತು ಕೂಳೂರಿನಲ್ಲಿ ನಾಗಬನಗಳನ್ನು ಧ್ವಂಸಗೈದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾವೂರಿನ ಸಫ್ವಾನ್, ಸುಹೈಬ್, ಪ್ರವೀಣ್ ಅನಿಲ್ ಮೊಂತೇರೊ, ನಿಖಿಲೇಶ್, ಜಯಕುಮಾರ್, ಪ್ರತೀಕ್, ಮಂಜುನಾಥ್ ಮತ್ತು ನೌಶಾದ್ ಬಂಧಿತ ಆರೋಪಿಗಳು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಆರೋಪಿಗಳನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಅವರ ಪತ್ತೆಗೂ ಕಾರ್ಯಾಚರಣೆ ಮುಂದುವರಿದಿದೆ ಎಂದರು.

ಸರಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಈಗಾಗಲೇ ಬಂಧಿತರಾಗಿದ್ದು, ಜಾಮೀನಿನ ಮೂಲಕ ಹೊರಬಂದಿರುವ ಇರ್ಷಾದ್ ಮತ್ತು ಅಚ್ಚಿ ಎಂಬ ಆರೋಪಿಗಳು ಈ ಪ್ರಕರಣದ ಮೂಲ ಸೂತ್ರಧಾರರು. ನಗರದಲ್ಲಿ ಕಳ್ಳತನಕ್ಕೆ ಪೊಲೀಸರು ಅಡ್ಡಿಯಾಗುತ್ತಿದ್ದು, ಪೊಲೀಸರ ಗಮನ ಬೇರೆಡೆ ಸೆಳೆಯಲು ಸಂಚು ರೂಪಿಸಿದ್ದರು. ಇದನ್ನು ತಮ್ಮ ಬಳಗದ ಸಫ್ವಾನ್ ಕಾವೂರು ಗಮನಕ್ಕೆ ತಂದಿದ್ದರು. ಸಫ್ವಾನ್ ತಂಡದವರು ಸೇರಿಕೊಂಡು ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದರೆ ಪೊಲೀಸರ ಗಮನ ಅದರತ್ತ ಕೇಂದ್ರೀಕೃತವಾಗುತ್ತದೆ ಎಂದು ನಾಗಬನಗಳಿಗೆ ಹಾನಿಯುಂಟು ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಈ ಮಾಹಿತಿ ನೀಡಿದ್ದಾರೆ. ಇನ್ನಷ್ಟು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

40 ಮಂದಿಯನ್ನು ಒಳಗೊಂಡ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದವರು ತಿಳಿಸಿದರು.

ಕೋಡಿಕಲ್ ನಾಗನ ಕಟ್ಟೆಯಿಂದ ಒಂದು ಕಲ್ಲನ್ನು ಎಸೆದಿರುವುದು ನ.13ರಂದು ಬೆಳಕಿಗೆ ಬಂದಿತ್ತು. ಇದಕ್ಕೂ ಮೊದಲು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರಿನ ನಾಗನ ಕಟ್ಟೆಗೆ ದುಷ್ಕರ್ಮಿಗಳು ಹಾನಿ ಎಸಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News