ಪ್ರೋತ್ಸಾಹಕ್ಕೆ ಧನ್ಯವಾದ, ಬಹುಮಾನ ಸ್ವೀಕರಿಸಲು ಅವಕಾಶವಿಲ್ಲ: ವಜ್ರದೇಹಿ ಸ್ವಾಮೀಜಿ ಹೇಳಿಕೆಗೆ ಕಮಿಷನರ್ ಪ್ರತಿಕ್ರಿಯೆ

Update: 2021-11-27 11:43 GMT

ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದವರಿಗೆ ಮುಖ್ಯಮಂತ್ರಿ, ರಾಷ್ಟ್ರಪತಿ ಪದಕ ಸೇರಿದಂತೆ ಇಲಾಖಾ ವತಿಯಿಂದ ಆಯಾ ಸಂದರ್ಭದಲ್ಲಿ ಎಲ್ಲಾ ರೀತಿಯ ಗೌರವ ನೀಡಲಾಗುತ್ತದೆ. ನಾಗಬನ ಧ್ವಂಸ ಪ್ರಕರಣವನ್ನು ಬೇಧಿಸಿದ್ದಲ್ಲಿ ಪೊಲೀಸರಿಗೆ ಚಿನ್ನದ ಪದಕ ನೀಡುವುದಾಗಿ ಹೇಳಿರುವ ಸ್ವಾಮೀಜಿಯವರ ಪ್ರೋತ್ಸಾಹಕ್ಕೆ ಧನ್ಯವಾದ. ಆದರೆ ಅಂತಹ ಯಾವುದೇ ರೀತಿಯ ಬಹುಮಾನ ಸ್ವೀಕರಿಸಲು ಪೊಲೀಸ್ ಇಲಾಖೆಯಲ್ಲಿ ಅವಕಾಶವಿಲ್ಲ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

ನಾಗಬನ ಧ್ವಂಸ ಪ್ರಕರಣದ ಆರೋಪಿಗಳ ಬಂಧನದ ಕುರಿತಂತೆ ಆಯೋಜಿಸಲಾದ ಪತ್ರಿಕಾಗೋಷ್ಠಿ ಸಂದರ್ಭ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದ ಅವರು, ಸ್ಥಳೀಯರು, ಸಂಘಟನೆಗಳು, ರಾಜಕೀಯ ಪಕ್ಷದ ನಾಯಕರು, ಜನಪ್ರತಿನಿಧಿಗಳು ಪೊಲೀಸ್ ಇಲಾಖೆಯ ಕರ್ತವ್ಯದ ಬಗ್ಗೆ ವಿಶ್ವಾಸವಿರಿಸಿ ಸಂಯಮದಿಂದಿದ್ದು ಶಾಂತಿ ಕಾಪಾಡಲು ಸಹಕರಿಸಿದ್ದಾರೆ ಎಂದರು.

ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ತಮ್ಮ ಕರ್ತವ್ಯಕ್ಕಾಗಿ ತೆರಿಗೆದಾರರಿಂದ ವೇತನವನ್ನು ಪಡೆಯುತ್ತಾರೆ. ಇಲಾಖಾ ಕೆಲಸ ಕರ್ತವ್ಯವಾಗಿದ್ದು, ವಿಶೇಷ ಸಂದರ್ಭಗಳಲ್ಲಿ ಇಲಾಖೆಯ ವ್ಯವಸ್ಥೆಯಲ್ಲಿಯೇ ಸಿಬ್ಬಂದಿಗೆ ಬಹುಮಾನ ನೀಡುವ ವ್ಯವಸ್ಥೆ ಇದೆ ಎಂದವರು ಹೇಳಿದರು.

ಕೋಡಿಕಲ್‌ನಲ್ಲಿ ನಾಗಬನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿತ್ತು. ಈ ಸಂದರ್ಭ ವಜ್ರದೇಹಿ ಮಠದ ಸ್ವಾಮೀಜಿಯವರು ಪ್ರಕರಣವನ್ನು 24 ದಿನಗಳಲ್ಲಿ ಬೇಧಿಸಿದರೆ ಪೊಲೀಸರಿಗೆ ಚಿನ್ನದ ಪದಕ ನೀಡುವುದಾಗಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News