ಶೀರೂರು: ‘ದೀನ’ ವಿಶೇಷ ಮಕ್ಕಳ ಶಿಕ್ಷಣ, ಪುನರ್ವಸತಿ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ

Update: 2021-11-27 14:31 GMT

ಶೀರೂರು, ನ 27: ಶಿರೂರಿನ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಶಿಕ್ಷಣ ಪ್ರೇಮಿ ದಿ. ಸಯ್ಯದ್ ಅಬ್ದುಲ್ ಖಾದರ್ ಬಾಶು ಅವರ ಕನಸಿನ ಯೋಜನೆ ವಿಶೇಷ ಮಕ್ಕಳ ಶಿಕ್ಷಣ ಹಾಗೂ ಪುನರ್ವಸತಿ ಸಂಸ್ಥೆ ‘ದೀನ’ ಸ್ಕೂಲ್ ಫಾರ್ ಸ್ಪೆಷಲ್ ಎಜುಕೇಶನ್ ಆ್ಯಂಡ್ ರಿಹ್ಯಾಬಿಲಿಟೆಶನ್ ಇದರ ನೂತನ ಹಾಗೂ ಸುಸಜ್ಜಿತ ಕಟ್ಟಡವು ಶನಿವಾರ ಶುಭಾರಂಭಗೊಂಡಿತು.

ಶೀರೂರು ಮೊಹಿದ್ದೀನ್‌ ಪುರ ಸಯ್ಯದ್ ಮೀರನ್ ಮೊಮೇರಿಯಲ್ ಚಾರಿಟೇಬಲ್ ಟ್ರಸ್ಟ್ ಕ್ಯಾಂಪಸ್‌ ನಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಉದ್ಘಾಟಿಸಿದ 'ವಾರ್ತಾಭಾರತಿ' ಕನ್ನಡ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮಾತನಾಡಿ, ಸಯ್ಯದ್ ಅಬ್ದುಲ್ ಖಾದರ್ ಬಾಶು ಅವರ ಹೃದಯವಂತಿಕೆ ಹಾಗೂ ದೂರದೃಷ್ಟಿಯ ಫಲದಿಂದ ಇಂತಹ ವಿಶಿಷ್ಟ ಶಿಕ್ಷಣ ಸಂಸ್ಥೆ ಈ ಪುಟ್ಟ ಊರಿಗೆ ಬಂದಿದೆ. ದೊಡ್ಡ ನಗರಗಳಲ್ಲೂ ಸಿಗದ ಈ ಸೌಲಭ್ಯವನ್ನು ತಮ್ಮ ಊರಿಗೆ ತರಲು ಸಹಕರಿಸಿದ ಶೀರೂರು ನಾಗರೀಕರು ಅಭಿನಂದನಾರ್ಹರು ಎಂದು ಹೇಳಿದರು.

ವಿಶೇಷ ಮಕ್ಕಳ ಕಾಳಜಿ ಹೇಗೆ ಎಂಬುದರ ಬಗ್ಗೆ ಜನರಿಗೆ ಮಂದಿರ, ಮಸೀದಿ ಹಾಗೂ ಚರ್ಚ್‌ಗಳಲ್ಲಿ ಒಂದು ವಿಷಯವಾಗಿ ಕಲಿಸಬೇಕಾಗಿದೆ. ಆ ಮಕ್ಕಳಿಗೆ ಸಮಾನ ಅವಕಾಶ ಸಿಗುವಂತೆ, ಅವರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮಗಿದೆ. ಇಂತಹ ಶಿಕ್ಷಣ ಸಂಸ್ಥೆ ನಿರ್ಮಿಸುವುದು ಪುಣ್ಯದಾಯಕ ಕೆಲಸ ಎಂದು ಹೇಳಿದರು.

ಕುಂದಾಪುರ ಮಾತಾಶ್ರೀ ಆಸ್ಪತ್ರೆಯ ಮನೋ ತಜ್ಞೆ ಡಾ. ಜಾಹ್ನವಿ ಮಾತನಾಡಿ, ಮನುಷ್ಯನಿಗೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕೂಡ ಮುಖ್ಯವಾಗಿರುತ್ತದೆ. ಆದುದರಿಂದ ಪ್ರತಿಯೊಬ್ಬರು ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಅಂಪಾರು ವಗ್ಜೋತಿ ವಿಶೇಷ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಎಚ್. ಮಾತನಾಡಿ, ಇಡೀ ಜಿಲ್ಲೆಯಲ್ಲಿಯೇ ಅತ್ಯುತ್ತಮವಾದ ಕಟ್ಟಡ ನಿರ್ಮಿಸುವ ಮೂಲಕ ಈ ಸಂಸ್ಥೆ ವಿಶೇಷ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 14 ವಿಶೇಷ ಶಾಲೆಗಳಿದ್ದು, ಇಷ್ಟು ಸಂಖ್ಯೆಯ ಶಾಲೆಗಳು ಬೇರೆ ಯಾವುದೇ ಜಿಲ್ಲೆಗಳಲ್ಲಿ ಇಲ್ಲ. ಇದರಿಂದ ಉಡುಪಿ ಜಿಲ್ಲೆಯವರ ಸೇವಾ ಮನೋಭಾವನೆ ಯಾವ ರೀತಿಯದ್ದು ಎಂದು ತೋರಿಸುತ್ತದೆ. ಸರಕಾರ ವಿಶೇಷ ಶಾಲೆಗಳನ್ನು ಗುರುತಿಸಿ ಅನುದಾನ ಒದಗಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಗಂಗೊಳ್ಳಿ ತೌಹೀದ್ ಏಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಖಾಲಿಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಟ್ಕಳದ ಮಕ್ಕಳ ತಜ್ಞ ವೈದ್ಯ ಡಾ. ಮುಹಮ್ಮದ್ ಯಾಸೀನ್ ಮೊಹತೇಶಾಮ್, ಸ್ಥಳೀಯ ಗಣ್ಯರಾದ ಎಸ್.ಎಂ. ಸಯೀದ್, ಎಸ್.ಎಂ.ಜಾಫರ್, ಎಸ್.ಎಂ.ಅಜ್ಮಲ್ ಮೊದಲಾದವರು ಉಪಸ್ಥಿತರಿದ್ದರು.

'ದೀನಾ' ಸಂಸ್ಥೆಯ ಶೈಕ್ಷಣಿಕ ನಿರ್ದೇಶಕಿ ಫರೀದಾ ರಿಝ್ವಾನ್ ವರದಿ ವಾಚಿಸಿ, ಅನಿಸಿಕೆ ವ್ಯಕ್ತಪಡಿಸಿದರು. ಈ ಹಿಂದೆ ಸಂಸ್ಥೆಯ ಉಡುಪಿಯ ಸ್ನೇಹ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಮಾಲತಿ ಹರೀಶ್ ಉದ್ಯಾವರ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ತೌಹೀದ್ ಶಿಕ್ಷಣ ಸಮೂಹದ ಶಿಕ್ಷಣ ಕಾರ್ಯಕಾರಿ ನಿರ್ದೇಶಕ ಡಾ. ಅಮ್ಜದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತೌಹೀದ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಖ್ತರ್ ಅಹ್ಮದ್ ಖಾನ್ ಸಹಕರಿಸಿದರು. ದೀನಾ ವಿಶೇಷ ಮಕ್ಕಳ ಶಾಲೆಯ ಮುಖ್ಯೋಪಧ್ಯಾಯಿನಿ ಜಾಕ್ಸಿನ ವಂದಿಸಿದರು.

ಈ ಸಂಸ್ಥೆಯ ನಿರ್ವಹಣೆಯ ಜವಾಬ್ದಾರಿಯನ್ನು ಗಂಗೊಳ್ಳಿಯ ತೌಹೀದ್ ಎಜ್ಯುಕೇಶನಲ್ ಟ್ರಸ್ಟ್ ವಹಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News