ಕೋವಿಡ್ 3ನೆ ಅಲೆಯ ಆತಂಕ; ದ.ಕ.ಜಿಲ್ಲೆಯಲ್ಲಿ ಅಲರ್ಟ್ ಆಗಿರಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ದೇಶನ

Update: 2021-11-27 14:29 GMT

ಮಂಗಳೂರು, ನ. 27: ಕೊರೋನ ಪಾಸಿಟಿವ್ ಪ್ರಕರಣಗಳು ಮತ್ತೆ ಭೀತಿ ಹುಟ್ಟಿಸಿದ್ದು, ಮೂರನೇ ಅಲೆಯ ಆತಂಕ ಹುಟ್ಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಲರ್ಟ್ ಆಗಿರುವಂತೆ ಸರ್ಕಾರ ಸೂಚನೆ ನೀಡಿದೆ.

ಜಿಲ್ಲೆಗೆ ಕೋವಿಡ್ ಭೀತಿ ಎದುರಾಗದಂತೆ ತಡೆಯುವಲ್ಲಿ ಮೂರನೇ ಅಲೆ ನಿಯಂತ್ರಿಸಲು ಕೇರಳ ಗಡಿಯಲ್ಲಿ ದಿನ 24 ಗಂಟೆಯೂ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಸೂಚನೆ ನೀಡಿದ್ದಾರೆ.

ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ವೀಡಿಯೊ ಕಾನರೆನ್ಸ್ ನಡೆಸಿದ ಸಿಎಂ ಬೊಮ್ಮಾಯಿ, ಕೇರಳದಿಂದ ದ.ಕ.ಕ್ಕೆ ಆಗಮಿಸುವವರ ಮೇಲೆ ವಿಶೇಷ ನಿಗಾ ವಹಿಸುವಂತೆ ಸೂಚಿಸಿದ್ದಾರೆ.

ಕೇರಳ ಗಡಿಯಲ್ಲಿ ಚೆಕ್‌ ಪೋಸ್ಟ್‌ ಗಳನ್ನು ಮಾಡಿ 3 ಪಾಳಿಗಳಲ್ಲಿ ಅಧಿಕಾರಿ- ಸಿಬ್ಬಂದಿ ನಿಯೋಜಿಸಬೇಕು. ಕೇರಳದಿಂದ ಬರುವವರೆಲ್ಲರೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು, ಲಸಿಕೆ ಪಡೆದಿರುವುದನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಎಂದು ಸಿಎಂ ನಿರ್ದೇಶಿಸಿದ್ದಾರೆ.

ಜಿಲ್ಲೆಯಲ್ಲಿರುವ ಎಲ್ಲ ಕಾಲೇಜುಗಳು, ಹಾಸ್ಟೆಲ್‌ಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಆರ್‌ಟಿಪಿಸಿಆರ್ ತಪಾಸಣೆಗೆ ಒಳಪಡಿಸ ಬೇಕು. ಕೇರಳದಿಂದ ಬರುವವರು 7 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ಶಾಲೆ ಕಾಲೇಜುಗಳಲ್ಲಿ ಭೌತಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ದ.ಕ.: 13 ಮಂದಿಗೆ ಕೊರೋನ ಸೋಂಕು ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ (ನ.27) 13 ಮಂದಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಶನಿವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 7 ಮಂದಿ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ 128 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ. 0.30 ಆಗಿದೆ.

ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 88,883 ಮಾಸ್ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. 1,07,81,276 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News