ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ಪ್ರಕರಣ; ಡಾ. ರತ್ನಾಕರ್ ಬಂಧನ

Update: 2021-11-27 15:30 GMT
ಡಾ. ರತ್ನಾಕರ್

ಮಂಗಳೂರು, ನ. 27: ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ರತ್ನಾಕರ್‌ ನನ್ನು ಬಂಧಿಸಲಾಗಿದ್ದು, 2 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಆರೋಪಿ ಡಾ. ರತ್ನಾಕರ್‌ನನ್ನು ಶುಕ್ರವಾರ ಮಹಿಳಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಶನಿವಾರ ಮೂವರು ಸಂತ್ರಸ್ತರು ಹಾಗೂ ಇನ್ನೊಬ್ಬಾಕೆ ಸೇರಿ ನಾಲ್ವರು ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರತ್ನಾಕರನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಪೊಲೀಸ್ ಕಸ್ಟಡಿ ಪಡೆಯಲಾಗಿದೆ. ಸಂತ್ರಸ್ತ ಯವತಿಯರು ಆರೋಪಿ ರತ್ನಾಕರ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ನೀಡಿದ್ದಾರೆ.

ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಒಬ್ಬ ಆಂತರಿಕ ವಿಚಾರಣಾ ಸಮಿತಿಯ ಸದಸ್ಯರು ಮತ್ತು ಮೂರು ಮಂದಿ ಸಂತ್ರಸ್ತರನ್ನು ವಿಚಾರಗೊಳಪಡಿಸಲಾಗಿದೆ. ಈಗಾಗಲೇ ಸೋರಿಕೆಯಾಗಿರುವ ವೀಡಿಯೋದಲ್ಲಿರುವಂತೆ ಆರೋಪಿಯು ಸಂತ್ರಸ್ತ ಮಹಿಳೆಯರನ್ನು ಕುಂದಾಪುರ, ಮುರ್ಡೇಶ್ವರ, ಮಡಿಕೇರಿ, ಪಿರಿಯಾಪಟ್ಟಣಕ್ಕೆ ಕರೆದೊಯ್ದು ತಪ್ಪೆಸಗಿರುವುದು ಕಂಡು ಬಂದಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಮಹಿಳಾ ಸಿಬ್ಬಂದಿ ಜೊತೆ ರತ್ನಾಕರ್ ಚೆಲ್ಲಾಟ ನಡೆಸಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳಾ ಸಂಘಟನೆ ಕಾರ್ಯಕರ್ತೆಯೊಬ್ಬರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಆರೋಪಿ ರತ್ನಾಕರನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇನ್‌ಸ್ಪೆಕ್ಟರ್ ರೇವತಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಯ ಮೊಬೈಲ್ ಫೋನ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈತ ಪೊಲೀಸ್ ವಶವಾದ ಬಳಿಕವೂ ಸಂತ್ರಸ್ತ 8 ಮಂದಿ ಮಹಿಳೆಯರಲ್ಲಿ ಮೂರೇ ಮಂದಿ ಶನಿವಾರ ದೂರು ನೀಡಿದ್ದಾರೆ. ಸಂತ್ರಸ್ತರೆಲ್ಲ ದೂರು ನೀಡುವಂತೆ ಪೊಲೀಸರು ಅಭಯ ನೀಡಿದರೂ ಯಾರೂ ಧೈರ್ಯ ಮಾಡಿಲ್ಲ. ಆದರೆ ವಿಚಾರಣೆ ವೇಳೆ ಹಾಜರಾಗಿ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News