ಸಂವಿಧಾನ ದಾಸ್ತವೇಜು ಅಲ್ಲ, ಮಹಾನ್ ಗ್ರಂಥ: ನ್ಯಾ.ಮುಹಮ್ಮದ್ ಮುಸ್ತಾಕ್‌

Update: 2021-11-27 16:02 GMT

ಉಡುಪಿ, ನ.27: ಭಾರತದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಗೌರವಾನ್ವಿತ ಬದುಕು ರೂಪಿಸುವ ಮಹತ್ತರ ಗ್ರಂಥವೇ ಹೊರತು ದಾಸ್ತವೇಜು ಅಲ್ಲ. ಈ ನಿಟ್ಟಿನಲ್ಲಿ ಸಂವಿಧಾನವನ್ನು ಗೌರವಿಸಿ, ಹಕ್ಕುಗಳನ್ನು ಪಾಲಿಸಬೇಕೆಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎ.ಮುಹಮ್ಮದ್ ಮುಸ್ತಾಕ್ ಹೇಳಿದ್ದಾರೆ.

ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ, ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಉಡುಪಿ ವಕೀಲರ ಸಂಘದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವೆಬಿನಾರ್ ಮೂಲಕ ಅವರು ಸಂದೇಶ ನೀಡಿದರು.

ಸಂವಿಧಾನವೂ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ಕೊಟ್ಟಿದ್ದು, ಕೇವಲ ಹಕ್ಕುಗಳನ್ನಷ್ಟೇ ಪಾಲಿಸುವುದು ಮುಖ್ಯವಲ್ಲ. ಸಮಾಜದಲ್ಲಿ ತಮ್ಮ ವರ್ತನೆ, ಜವಾಬ್ದಾರಿ, ಕರ್ತವ್ಯಗಳ ಪಾಲನೆಯೂ ಬಹಳ ಮುಖ್ಯವಾಗಿದೆ. ಈ ಬಗ್ಗೆ ಅರಿತುಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಮಾತನಾಡಿ, ಸಂವಿಧಾನವೂ ಜನರ ಕಲ್ಯಾಣಕ್ಕೆ ಅವಶ್ಯಕವಾಗಿರುವ ಅಂಶಗಳನ್ನು ಒಳಗೊಂಡಿದೆ. ಶೋಷಿತ, ಧಮನಿತ ಸಮುದಾಯವೂ ಕೂಡಾ ನ್ಯಾಯಯುತ ಹಕ್ಕುಗಳಿಂದ ರಕ್ಷಣೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ನಿರ್ಮಲಾ ಕುಮಾರ್ ಕೆ. ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನದ ಪೂರ್ವ ಪೀಠಿಕೆಯನ್ನು ಕಾನೂನು ವಿದ್ಯಾರ್ಥಿ ವೈಭವ್ ಭಟ್ ವಾಚಿಸಿದರು. ಕಾನೂನು ವಿದ್ಯಾರ್ಥಿಗಳಾದ ಭವ್ಯಾ ಸ್ವಾಗತಿಸಿದರು. ಪ್ರಣವ್ ಭಟ್ ಅತಿಥಿಗಳನ್ನು ಪರಿಚಯಿಸಿದರು. ರಕ್ಷಾ ವಂದಿಸಿ, ವರ್ಷಿತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News