ಕೋವಿಡ್ ನಿಯಂತ್ರಣ ಲಸಿಕೀಕರಣ; ದ.ಕ.ಜಿಲೆಯಲ್ಲಿ 39,424 ಮಂದಿಗೆ ಲಸಿಕೆ

Update: 2021-11-27 16:25 GMT

ಮಂಗಳೂರು, ನ. 27: ಕೋವಿಡ್ ನಿಯಂತ್ರಣ ಲಸಿಕೀರಣಕ್ಕೆ ಸಂಬಂಧಿಸಿ ಜನರಲ್ಲಿ ಆಸಕ್ತಿಯನ್ನು ಮೂಡಿಸುವ ಸಲುವಾಗಿ ಅಭಿಯಾನದ ರೀತಿಯಲ್ಲಿ ದ.ಕ. ಜಿಲ್ಲಾಡಳಿತದಿಂದ ಮತ್ತೆ ಲಸಿಕೀಕರಣಕ್ಕೆ ಒತ್ತು ನೀಡಲಾಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಮೊಬೈಲ್ ಲಸಿಕೀರಣಕ್ಕೂ ಒತ್ತು ನೀಡಲಾಗಿದ್ದು, ನಗರದ ಹಲವೆಡೆ ಇಂದು ಲಸಿಕೆ ಪಡೆಯಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕಂಡು ಬಂದಿದೆ.

ದ.ಕ. ಜಿಲ್ಲೆಯಲ್ಲಿ ಇಂದು 39,424 ಮಂದಿ ಲಸಿಕೆ ಪಡೆದುಕೊಂಡಿದ್ದು, ಈವರೆಗೆ ಜಿಲ್ಲೆಯಲ್ಲಿ ಈವರೆಗೆ 26,26,439 ಡೋಸ್ ಲಸಿಕೆ ನೀಡಿದಂತಾಗಿದೆ.

ರಾಜ್ಯದಲ್ಲಿ ಇಂದು ಬಿಬಿಎಂಪಿಯಲ್ಲಿ 47,307 ಮಂದಿಗೆ ಲಸಿಕೆ ನೀಡಲಾಗಿದ್ದು ಪ್ರಥಮ ಸ್ಥಾನದಲ್ಲಿದ್ದರೆ, ಅತೀ ಹೆಚ್ಚು ಲಸಿಕೀಕರಣ ನಡೆದ ಪ್ರಮುಖ ಐದು ಜಿಲ್ಲೆಗಳಲ್ಲಿ ದ.ಕ. ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ.

ನಗರದ ಉರ್ವಾಸ್ಟೋರ್ ಗ್ರೌಂಡ್, ಕುದ್ರೋಳಿ ಜಂಕ್ಷನ್, ಬೈಕಂಪಾಡಿ, ಸುರತ್ಕಲ್ ಜಂಕ್ಷನ್, ಕಾವೂರು ಜಂಕ್ಷನ್, ಜ್ಯೋತಿನಗರ ಮತ್ತು ಕುಂಜತ್ತಬೈಲ್, ಡಿಮಾರ್ಟ್ ಕೊಂಚಾಡಿ, ಕೆಎಸ್‌ಆರ್‌ಟಿಸಿ ಬಳಿ ಮೊಬೈಲ್ ಲಸಿಕೀಕರಣ ವ್ಯವಸ್ಥೆ ಇಂದು ವಿವಿಧ ಸಮಯದಲ್ಲಿ ಮಾಡಲಾಗಿತ್ತು. ಇದಕ್ಕೂ ಉತ್ತಮ ಸ್ಪಂದನೆ ದೊರಕಿದ್ದು, ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಳೆದ ಕೆಲ ದಿನಗಳಿಂದ ತಲಾ 100ರಷ್ಟು ಲಸಿಕೀರಣವಾಗುತ್ತಿದ್ದರೆ ಇಂದು ಕೆಲವೆಡೆ 500ಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಜನರು ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಪಾಲಿಕೆಯ ಮಲೇರಿಯ ನಿಯಂತ್ರಣಾಧಿಕಾರಿ ಡಾ. ಅಣಯ್ಯ ಕುಲಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News