ಬಾಹ್ಯ ಶಕ್ತಿಗಳಿಂದ ವಿದ್ಯಾರ್ಥಿಗಳ ಮುಗ್ಧತೆಯ ದುರುಪಯೋಗ: ಕೊಂಬೆಟ್ಟು ಪಪೂ ಕಾಲೇಜಿನ ಪ್ರಾಂಶುಪಾಲ ಸುರೇಶ್ ಆರೋಪ

Update: 2021-11-27 16:44 GMT

ಪುತ್ತೂರು, ನ. 27: ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಬಾಹ್ಯ ಶಕ್ತಿಗಳು ಪ್ರಚೋದನೆ ನೀಡುವ ಕೆಲಸ ಮಾಡಿದೆ ಎಂದು ಇತ್ತೀಚೆಗೆ ಇಲ್ಲಿನ ವಿದ್ಯಾರ್ಥಿಗಳ ನಡುವಿನ ಹೊಡೆದಾಟಕ್ಕೆ ಸಂಬಂಧಿಸಿ ಕಾಲೇಜಿನ ಪ್ರಾಂಶುಪಾಲ ಸುರೇಶ್ ಎನ್.ಕೆ. ಆರೋಪಿಸಿದ್ದಾರೆ.

ಅವರು ಶನಿವಾರ ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಂಬೆಟ್ಟು ಪದವಿ ಪೂರ್ವ ಕಾಲೇಜಿಗೆ ಶತಮಾನ ಗಳ ಇತಿಹಾಸವಿದ್ದು, ಇಲ್ಲಿ ಒಟ್ಟು 1,187 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇಲ್ಲಿ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಒಟ್ಟಾಗಿ ಶೈಕ್ಷಣಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳಿಗೂ ಭದ್ರತೆ ಹಾಗೂ ಸುರಕ್ಷತೆ ನೀಡಲು ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಸಿಬ್ಬಂದಿ ವರ್ಗ ಬದ್ಧವಾಗಿದೆ. ಮೊನ್ನೆ ನಡೆದ ಅಹಿತಕರ ಘಟನೆಯು ಕಾಲೇಜ್ ಕ್ಯಾಂಪನ್‌ನ ಒಳಗೆ ನಡೆದಿಲ್ಲ. ಅಲ್ಲದೆ ಇಲ್ಲಿ ಯಾವುದೇ ವಿದ್ಯಾರ್ಥಿಗಳು ತರಗತಿಯೊಳಗಡೆ ಮಾರಕ ಆಯುಧಗಳನ್ನು ತಂದಿಲ್ಲ ಎಂದರು.

ಅಹಿತಕರ ಘಟನೆಗೆ ಸಂಬಂಧಿಸಿ ಎಲ್ಲಾ ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಕರೆದು ಮಾತುಕತೆ ನಡೆಸಲಾಗಿದೆ. ಅವರಿಂದ ಯಾವುದೇ ದೂರುಗಳು ಬಂದಿಲ್ಲ. ಓರ್ವ ವಿದ್ಯಾರ್ಥಿಯು ವಿದ್ಯಾರ್ಥಿನಿಗೆ ನೋಟ್ಸ್ ಪುಸ್ತಕ ನೀಡಿದ ವಿಚಾರ ಸಂಘರ್ಷಕ್ಕೆ ಮೂಲವಾಗಿದ್ದು, ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರನ್ನು ಕರೆದು ಅವರಿಗೆ ಮನವರಿಕೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಪೋಷಕರು ಸಕಾರಾತ್ಮಕವಾಗಿಯೇ ಮಾತನಾಡಿದ್ದಾರೆ. ಅಲ್ಲದೆ ಯಾವುದೆ ದೂರುಗಳನ್ನು ನೀಡಿಲ್ಲ. ಆದರೆ ಬಾಹ್ಯ ಸಂಘಟನೆಗಳ ಪ್ರಚೋದನೆಯಿಂದಾಗಿ ಇದು ಮುಂದುವರಿದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಇಂತಹ ಪ್ರಚೋದನೆಯು ಆತಂಕಕಾರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಲೇಜು ಬಗ್ಗೆ ಕೆಟ್ಟ ರೀತಿಯಲ್ಲಿ ಪ್ರಚಾರ ನಡೆಸುತ್ತಿದೆ. ಇಂತಹ ಅಪಪ್ರಚಾರಗಳು ಮುಂದುವರಿದಲ್ಲಿ ಅವರ ವಿರುದ್ಧ ಕಾನೂನು ರೀತಿಯಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದರು.

ಕಾಲೇಜ್ ಕ್ಯಾಂಪಸ್ ಒಳಗಡೆ ಯಾವುದೇ ಘಟನೆಗಳು ನಡೆದರೂ ಕೂಡಲೇ ತರಗತಿಯ ಉಪನ್ಯಾಸಕರ ಗಮನಕ್ಕೆ ಅದನ್ನು ತರುವಂತೆ ಕಟ್ಟು ನಿಟ್ಟಾಗಿ ಸೂಚನೆ ನೀಡಲಾಗಿದೆ. ಪ್ರಕರಣದ ಕುರಿತು ಪುತ್ತೂರು ಡಿವೈಎಸ್‌ಪಿಯವರ ನೇತೃತ್ವದಲ್ಲಿ ತನಿಖೆ ಮುಂದುವರಿಯುತ್ತಿದೆ. ತರಗತಿಗಳು ಎಂದಿನಂತೆ ನಡೆಯುತ್ತಿವೆ ಎಂದು ಸುರೇಶ್ ಎನ್.ಕೆ. ಮಾಹಿತಿ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್ ಮಾತನಾಡಿ, ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸಮಾನವಾಗಿದ್ದು, ಹೆಣ್ಣು ಮಕ್ಕಳ ಕಲಿಕೆ ಜೊತೆಗೆ ಅವರ ಮಾನ, ಪ್ರಾಣ ರಕ್ಷಣೆ ನಮ್ಮ ಹೊಣೆಯಾಗಿದೆ. ಅದರ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ. ಇಂತಹ ಅಹಿತರಕ ಘಟನೆಯಲ್ಲಿ ಅಪ್ರಾಪ್ತ ವಯಸ್ಕರು ಮಾಡಿದ್ದು, ಬಾಹ್ಯ ಪ್ರಚೋದನೆಯಿಂದಾಗಿ ಅದು ಮುಂದುವರಿಯಿತು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪನ್ಯಾಸಕರಾದ ಈಶ್ವರ್ ಭಟ್ ಬೇರಿಕೆ, ಸುಬ್ರಹ್ಮಣ್ಯ ಎಂ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News