ಕರಾವಳಿಯಲ್ಲಿ ನಡೆದ ತ್ರಿಶೂಲ ವಿತರಣೆ ಬಗ್ಗೆ ಪೊಲೀಸ್ ತನಿಖೆಯಾಗಲಿ: ಯು.ಟಿ.ಖಾದರ್

Update: 2021-11-27 16:49 GMT

ಮಂಗಳೂರು : ಕರಾವಳಿಯಲ್ಲಿ ಕೆಲವು ಕಡೆ ತ್ರಿಶೂಲದಿಂದ ಹಲ್ಲೆ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಮತ್ತು ತ್ರಿಶೂಲ ವಿತರಣೆಯ ಕಾರಣದಿಂದ ಹಲ್ಲೆ ನಡೆದಿದ್ದರೆ ಈ ದೀಕ್ಷೆ ನೀಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಅಹಿತಕರ ಘಟನೆಗಳು ಹೆಚ್ಚುತ್ತಿದೆ. ಜೊತೆಗೆ ಪೊಲೀಸರ ಮೇಲೆ ರಾಜಕೀಯ ಒತ್ತಡವೂ ಹೆಚ್ಚುತ್ತಿದೆ. ಇದರಿಂದಾಗಿ ಸಮಾಜಘಾತುಕ ಶಕ್ತಿಗಳು ಸಮಾಜದ ಶಾಂತಿ ಭಂಗ ಉಂಟು ಮಾಡುವಂತಹ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿವೆ. ಆದ್ದರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ರಾಜ್ಯ ಗೃಹ ಸಚಿವರು ಜಿಲ್ಲಾಮಟ್ಟದಲ್ಲಿ ತುರ್ತು ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರದ ಅಸಮರ್ಪಕ ನೀತಿಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಮಾನಸಿಕ ಒತ್ತಡದಿಂದ ಬಳಲುವಂತಾಗಿದೆ. ಎಂಬಿಬಿಎಸ್ ಪರೀಕ್ಷೆ ಮುಗಿಸಿದವರು ಕೌನ್ಸಿಲಿಂಗ್ ನಡೆಯದೇ ಇದ್ದ ಕಾರಣ ಕಾಯುತ್ತಿದ್ದಾರೆ. ನೀಟ್ ಪರೀಕ್ಷೆಗೆ ಬರೆದವರು ಸೀಟು ಹಂಚಿಕೆ ಆಗದೇ ಇರುವ ಕಾರಣ ಒತ್ತಡಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಮೌನವಹಿಸಿ ವಿದ್ಯಾರ್ಥಿಗಳಿಗೆ ದ್ರೋಹವೆಸಗಿದೆ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್ ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News