ಕೋವಿಡ್ ಹೊಸ ಪ್ರಬೇಧದ ಭೀತಿ; ವಿದೇಶಿ ಪ್ರವಾಸ ನಿರ್ಬಂಧ ಸಡಿಲಿಕೆ ಪುನರ್ ಪರಿಶೀಲನೆಗೆ ಪ್ರಧಾನಿ ಸಲಹೆ

Update: 2021-11-28 01:51 GMT

ಹೊಸದಿಲ್ಲಿ: ಸಾರ್ಸ್-ಕೋವ್-2 ವೈರಸ್‌ನ ಹೊಸ ಪ್ರಬೇಧ ಒಮಿಕ್ರಾನ್ ಭೀತಿ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಪ್ರವಾಸದ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ.

ವಿಓಸಿ ಎಂದು ಹೊಸ ಪ್ರಬೇಧವನ್ನು ವಿಶ್ವ ಆರೋಗ್ಯ ಸಂಸ್ಥೆ ಹೆಸರಿಸಿ, ಕಳವಳಕಾರಿ ಎಂದು ಈ ವೈರಾಣುವನ್ನು ಬಣ್ಣಿಸಿದ ಬೆನ್ನಲ್ಲೇ, ಕೋವಿಡ್-19 ಮತ್ತು ಲಸಿಕೆ ನೀಡಿಕೆ ಕುರಿತ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲು ಶನಿವಾರ ಕರೆದಿದ್ದ ಸಮಗ್ರ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಈ ಸೂಚನೆ ನೀಡಿದ್ದಾರೆ.

ವಿದೇಶಗಳಿಂದ ಆಗಮಿಸುವವರ ಬಗ್ಗೆ ತೀವ್ರ ನಿಗಾ ಇಡುವ ಅಗತ್ಯತೆಯನ್ನು ಒತ್ತಿ ಹೇಳಿದ ಅವರು, ಮಾರ್ಗಸೂಚಿಗೆ ಅನುಗುಣವಾಗಿ ಪ್ರಯಾಣಿಕರನ್ನು ಕೋವಿಡ್ ತಪಾಸಣೆಗೆ ಗುರಿಪಡಿಸಬೇಕು. ಅದರಲ್ಲೂ ಮುಖ್ಯವಾಗಿ ಅಪಾಯ ಸಾಧ್ಯತೆ ಇರುವ ದೇಶಗಳೆಂದು ಗುರುತಿಸಿದ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ಆದೇಶಿಸಿದರು.

ಕೋವಿಡ್-19 ವಿರುದ್ಧದ ಲಸಿಕೆಯ ಎರಡನೇ ಡೋಸ್ ಹೆಚ್ಚಿಸಲು ಸಲಹೆ ಮಾಡಿದ ಅವರು, ಮೊದಲ ಡೋಸ್ ಪಡೆದ ಎಲ್ಲರೂ ಎರಡನೇ ಡೋಸ್ ಪಡೆಯುವುದು ಅನಿವಾರ್ಯ ಎನ್ನುವುದನ್ನು ಮನವರಿಕೆ ಮಾಡುವಂತೆ ರಾಜ್ಯಗಳ ಮನವೊಲಿಸಬೇಕು ಎಂದು ಅಭಿಪ್ರಾಯಪಟ್ಟರು.

ಜನತೆ ಕೂಡಾ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸೋಂಕು ಹರಡುವುದು ತಡೆಯಬೇಕು ಎಂದು ಹೇಳಿದರು.

ಉನ್ನತ ಅಧಿಕಾರಿಗಳ ಜತೆ ನಡೆಸಿದ ಎರಡು ಗಂಟೆಗಳ ಸುಧೀರ್ಘ ಸಭೆಯಲ್ಲಿ, ಮೋದಿ ಓಮಿಕ್ರಾನ್ ಅಥವಾ ಬಿ.1.1.529 ಪ್ರಬೇಧದ ಬಗ್ಗೆ, ಅದರ ಗುಣಲಕ್ಷಣಗಳು, ವಿವಿಧ ದೇಶಗಳಲ್ಲಿ ಅದು ಬೀರಿದ ಪರಿಣಾಮ ಹಾಗೂ ಭಾರತದ ಮೇಲೆ ಅದರ ಪ್ರಭಾವದ ಬಗ್ಗೆ ವಿವರಿಸಿದರು. ಒಮಿಕ್ರಾನ್ ಪ್ರಬೇಧದ ಸೋಂಕು ಪ್ರಕರಣ ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ ಮೊಟ್ಟಮೊದಲ ಬಾರಿಗೆ ನವೆಂಬರ್ 24ರಂದು ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News