ಎಂಎಸ್‌ಪಿ ಚರ್ಚೆಗೂ ಮುನ್ನ ಪ್ರತಿಭಟನಾ ಸ್ಥಳ ತೊರೆಯುವುದಿಲ್ಲ: ರೈತ ಮುಖಂಡ ರಾಕೇಶ್ ಟಿಕಾಯತ್

Update: 2021-11-29 10:12 GMT

ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹಾಗೂ  ಇತರ ವಿಷಯಗಳ ಕುರಿತು ಚರ್ಚೆ ನಡೆಯದ ಹೊರತು ರೈತರು ಪ್ರತಿಭಟನಾ ಸ್ಥಳದಿಂದ ಹೊರಬರುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಸೋಮವಾರ ಹೇಳಿದ್ದಾರೆ.

"ದೇಶದಲ್ಲಿ ಯಾವುದೇ ಪ್ರತಿಭಟನೆಗಳು ಇರಬಾರದು ಎಂದು ಸರಕಾರ ಬಯಸುತ್ತದೆ. ಆದರೆ ಇತರ ವಿಷಯಗಳು ಸೇರಿದಂತೆ ಎಂಎಸ್‌ಪಿ ಕುರಿತು ಯಾವುದೇ ಚರ್ಚೆಯ ಮೊದಲು ನಾವು ಪ್ರತಿಭಟನಾ ಸ್ಥಳವನ್ನು ಬಿಡುವುದಿಲ್ಲ" ಎಂದು ಟಿಕಾಯತ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಲೋಕಸಭೆಯಲ್ಲಿ ಕೃಷಿ  ಕಾನೂನುಗಳ ರದ್ದತಿ ಮಸೂದೆ, 2021 ರ ಅಂಗೀಕಾರವಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಕೆಯು ನಾಯಕ "ಆಂದೋಲನದ ಸಮಯದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ 750 ರೈತರಿಗೆ ಇದು ಶ್ರದ್ಧಾಂಜಲಿಯಾಗಿದೆ. ಎಂಎಸ್ ಪಿ ಸೇರಿದಂತೆ ಇತರ ಸಮಸ್ಯೆಗಳು ಇನ್ನೂ ಬಾಕಿ ಉಳಿದಿರುವುದರಿಂದ ಪ್ರತಿಭಟನೆಯು ಮುಂದುವರಿಯುತ್ತದೆ" ಎಂದರು.

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ಅನ್ನು ಲೋಕಸಭೆಯು ಅಂಗೀಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News