7ನೇ ಬಾರಿಗೆ ಲಿಯೊನೆಲ್ ಮೆಸ್ಸಿಗೆ ಬ್ಯಾಲನ್ ಡಿಓರ್ ಪ್ರಶಸ್ತಿ

Update: 2021-11-30 03:25 GMT
Photo: twitter.com/francefootball

ಪ್ಯಾರೀಸ್: ಖ್ಯಾತ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ದಾಖಲೆ ಏಳನೇ ಬಾರಿಗೆ ಪುರುಷರ ವಿಭಾಗದ ಬ್ಯಾಲನ್ ಡಿ ಓರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಮಹಿಳೆಯರ ವಿಭಾಗದ ಪ್ರಶಸ್ತಿ ಅಲೆಕ್ಸಿಯಾ ಪುಟೆಲ್ಸ್ ಅವರ ಪಾಲಾಗಿದೆ.

"ಇಂದು ನಾನು ಪ್ಯಾರೀಸ್‌ನಲ್ಲಿದ್ದೇನೆ. ನನಗೆ ಅತೀವ ಸಂತಸವಾಗಿದೆ; ನಿಜಕ್ಕೂ ಸಂತಸವಾಗಿದೆ. ನಾನು ಹೋರಾಟ ಮುಂದುವರಿಸಲಿದ್ದೇನೆ ಹಾಗೂ ಹೊಸ ಗುರಿಗಳನ್ನು ತಲುಪಲಿದ್ದೇನೆ. ಇನ್ನು ಎಷ್ಟು ವರ್ಷ ಎನ್ನುವುದು ನನಗೆ ಗೊತ್ತಿಲ್ಲ; ಆದರೂ ನಾನು ನಿಜಕ್ಕೂ ಆಸ್ವಾದಿಸುತ್ತಿದ್ದೇನೆ. ಬರ್ಕಾ, ಪ್ಯಾರೀಸ್ ಮತ್ತು ಅರ್ಜೆಂಟೀನಾ ತಂಡಗಳ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ" ಎಂದು ಪ್ರಶಸ್ತಿ ಸ್ವೀಕರಿಸಿದ ಮೆಸ್ಸಿ ಉದ್ಗರಿಸಿದರು.

ನಾಲ್ಕು ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳ ಪೈನಲ್‌ನಲ್ಲಿ ಸೋಲು ಅನುಭವಿಸಿದ ಬಳಿಕ ಕಳೆದ ಜುಲೈನಲ್ಲಿ ಅರ್ಜೆಂಟೀನಾ ತಂಡ ಕೋಪಾ ಅಮೆರಿಕ ಪ್ರಶಸ್ತಿ ಗೆಲ್ಲುವಲ್ಲಿ 34 ವರ್ಷ ವಯಸ್ಸಿನ ಮೆಸ್ಸಿ ಪ್ರಮುಖ ಪಾತ್ರ ವಹಿಸಿದ್ದರು.

ಅದ್ಭುತ ಪ್ರದರ್ಶನಕ್ಕಾಗಿ ರಾಬರ್ಟ್ ಲಿವಾಡೊವಸ್ಕಿ ಅವರನ್ನೂ ಮೆಸ್ಸಿ ಅಭಿನಂದಿಸಿದ್ದಾರೆ. "ರಾಬರ್ಟ್ ನೀವು ಬ್ಯಾಲರ್ ಡಿ ಓರ್‌ಗೆ ಅರ್ಹರು. ಕಳೆದ ವರ್ಷ ನೀವು ಈ ದೊಡ್ಡ ಪ್ರಶಸ್ತಿಯ ವಿಜೇತರು ಎನ್ನಲು ಎಲ್ಲರ ಒಪ್ಪಿಗೆಯೂ ಇತ್ತು" ಎಂದು ಬಣ್ಣಿಸಿದ್ದಾರೆ.

27 ವರ್ಷದ ಮಿಡ್‌ಫೀಲ್ಡರ್ ಪುಟೆಲ್ಸ್ ಅವರಿಗೆ ಇದು ಮೊದಲ ಗೌರವವಾಗಿದೆ. ಬಾರ್ಕಾ ಆಟಗಾರ್ತಿ ಒಟ್ಟಾರೆ 42 ಪಂದ್ಯಗಳಲ್ಲಿ 26 ಗೋಲು ಗಳಿಸಿದ್ದರು. ಚೆಲ್ಸಿಯಾ ವಿರುದ್ಧದ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಗೋಲು ಗಳಿಸಿದ್ದ ಇವರಿಗೆ ಕಳೆದ ಆಗಸ್ಟ್‌ನಲ್ಲಿ ಯುಇಎಫ್‌ಎ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿ ಸಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News