ಕ್ರಿಕೆಟ್ ಪ್ರವಾಸ ಮುಂದುವರಿಸುವ ಬಿಸಿಸಿಐ ನಿರ್ಧಾರಕ್ಕೆ ದಕ್ಷಿಣ ಆಫ್ರಿಕಾ ವಿದೇಶಾಂಗ ಸಚಿವಾಲಯ ಶ್ಲಾಘನೆ

Update: 2021-11-30 15:10 GMT
File Photo: PTI

ಜೋಹಾನ್ಸ್‌ಬರ್ಗ್, ನ.30: ಮುಂದಿನ ತಿಂಗಳು ಭಾರೀ ನಿರೀಕ್ಷಿತ ಸರಣಿಯನ್ನಾಡಲು ಆಗಮಿಸಲಿರುವ ಭಾರತದ ಕ್ರಿಕೆಟ್ ತಂಡಕ್ಕೆ ಸಂಪೂರ್ಣ ಜೈವಿಕ ಸುರಕ್ಷಿತ ವಾತಾವರಣ ನಿರ್ಮಿಸಲಾಗುವುದು ಎಂದಿರುವ ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವಾಲಯ, ಕೋವಿಡ್-19ನ ಹೊಸ ರೂಪಾಂತರ ಕಾಣಿಸಿಕೊಂಡು ಭೀತಿ ಉಂಟಾದ ಹೊರತಾಗಿಯೂ ಭಾರತ 'ಎ' ತಂಡವನ್ನು ಹಿಂದಕ್ಕೆ ಕರೆಸಿಕೊಳ್ಳದ ಬಿಸಿಸಿಐ ನಿರ್ಧಾರವನ್ನು ಅದು ಶ್ಲಾಘಿಸಿದೆ.

ಒಮಿಕ್ರಾನ್ ರೂಪಾಂತರ ಪತ್ತೆಯಾದ ಬಳಿಕ ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದ್ದರೂ ಭಾರತ 'ಎ' ತಂಡವು ದಕ್ಷಿಣ ಆಫ್ರಿಕಾ 'ಎ' ತಂಡದ ವಿರುದ್ದ ಬ್ಲೋಮ್‌ಫಾಂಟೈನ್‌ನಲ್ಲಿ ಮಂಗಳವಾರ ತನ್ನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯವನ್ನು ಆರಂಭಿಸಿದೆ.

ಭಾರತ ತಂಡದ ಆಟಗಾರರ ಆರೋಗ್ಯ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದಕ್ಷಿಣ ಆಫ್ರಿಕಾವು ಎಲ್ಲ ಮುನ್ನಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ. ದಕ್ಷಿಣ ಆಫ್ರಿಕಾ ಹಾಗೂ ಭಾರತ 'ಎ' ತಂಡಗಳು ಹಾಗೂ ಎರಡು ರಾಷ್ಟ್ರೀಯ ತಂಡಗಳ ಸುತ್ತಲೂ ಸಂಪೂರ್ಣ ಜೈವಿಕ-ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲಾಗುವುದು ಎಂದು ದೇಶದ ವಿದೇಶಾಂಗ ಸಚಿವಾಲಯದ ಅಂತರ್‌ರಾಷ್ಟ್ರೀಯ ಸಂಬಂಧಗಳು ಹಾಗೂ ಸಹಕಾರ ಇಲಾಖೆ ತಿಳಿಸಿದೆ.
 
ಭಾರತ 'ಎ' ತಂಡದ ದ.ಆಫ್ರಿಕಾ ಪ್ರವಾಸವನ್ನು ಮುಂದುವರಿಸಲು ನಿರ್ಧರಿಸುವ ಮೂಲಕ ಐಕ್ಯತೆಯನ್ನು ಪ್ರದರ್ಶಿಸುವ ಭಾರತದ ನಿರ್ಧಾರವು ತನ್ನ ಗಡಿಗಳನ್ನು ಮುಚ್ಚಲು ಹಾಗೂ ದಕ್ಷಿಣ ಆಫ್ರಿಕಾದಿಂದ ಪ್ರಯಾಣವನ್ನು ನಿರ್ಬಂಧಿಸಲು ನಿರ್ಧರಿಸಿದ ಹಲವಾರು ದೇಶಗಳಿಗಿಂತ ವ್ಯತಿರಿಕ್ತವಾಗಿದೆ. ಕ್ರಿಕೆಟ್ ಪ್ರವಾಸವನ್ನು ಮುಂದುವರಿಸಲು ಹಾಗೂ ಪ್ರಯಾಣದ ನಿರ್ಬಂಧಗಳು ಅಂತರ್ ರಾಷ್ಟ್ರೀಯ ಕ್ರೀಡೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಲು ಅವಕಾಶ ನೀಡದ್ದಕ್ಕಾಗಿ ದಕ್ಷಿಣ ಆಫ್ರಿಕಾ ಸರಕಾರವು ಬಿಸಿಸಿಐಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News