ಭ್ರಷ್ಟಾಚಾರ ಆರೋಪ: ವಿಚಾರಣಾ ಆಯೋಗದೆದುರು ಹಾಜರಾದ ಅನಿಲ್ ದೇಶಮುಖ್
Update: 2021-11-30 23:29 IST
ಮುಂಬೈ,ನ.30: ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ಅವರು ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರು ತನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ನ್ಯಾ(ನಿವೃತ್ತ).ಚಾಂದಿವಾಲ ಆಯೋಗದ ಎದುರು ಮಂಗಳವಾರ ಹಾಜರಾದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿರುವ ದೇಶಮುಖ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ದೇಶಮುಖ್ ವಿರುದ್ಧದ ಆರೋಪಗಳ ತನಿಖೆಗಾಗಿ ಮಹಾರಾಷ್ಟ್ರ ಸರಕಾರವು ಈ ವರ್ಷದ ಮಾರ್ಚ್‌ನಲ್ಲಿ ನ್ಯಾ.ಚಾಂದಿವಾಲ ನೇತೃತ್ವದ ಏಕಸದಸ್ಯ ಆಯೋಗವನ್ನು ರಚಿಸಿತ್ತು.
ನಗರದಲ್ಲಿಯ ಬಾರ್‌ಗಳು ಮತ್ತು ರೆಸ್ಟೋರಂಟ್‌ಗಳಿಂದ ಮಾಸಿಕ 100 ಕೋ.ರೂ.ಹಫ್ತಾವನ್ನು ಸಂಗ್ರಹಿಸುವಂತೆ ದೇಶಮುಖ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಸಿಂಗ್ ಆರೋಪಿಸಿದ್ದಾರೆ.