ಪ್ರತಿಭಟನೆಯ ವೇಳೆ ರೈತರ ಸಾವಿನ ಅಂಕಿ-ಅಂಶ ಇಲ್ಲ, ಆರ್ಥಿಕ ಪರಿಹಾರದ ಪ್ರಶ್ನೆ ಉದ್ಭವಿಸುವುದಿಲ್ಲ: ಕೇಂದ್ರ

Update: 2021-12-01 15:41 GMT

ಹೊಸದಿಲ್ಲಿ, ಡಿ.1: ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಸಂದರ್ಭ ಪ್ರಾಣ ಕಳೆದುಕೊಂಡ ರೈತರ ಬಗ್ಗೆ ಸರಕಾರದಲ್ಲಿ ದಾಖಲೆ ಇಲ್ಲ. ಆದುದರಿಂದ ಪರಿಹಾರ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಬುಧವಾರ ಸಂಸತ್ತಿಗೆ ತಿಳಿಸಿದ್ದಾರೆ.

ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ (ನವೆಂಬರ್ 29) ಸಂಸತ್ತಿನ ಉಭಯ ಸದನಗಳಲ್ಲಿ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ ಮಧ್ಯಭಾಗದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿದ್ದರು. ರೈತರ ಒಕ್ಕೂಟಗಳು, ಪ್ರತಿಪಕ್ಷದ ನಾಯಕರು ಹಾಗೂ ಸಾಮಾಜಿಕ ಹೋರಾಟಗಾರರು ಪ್ರತಿಭಟನೆ ಸಂದರ್ಭ 700ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದಾರೆ ಎಂದು ದಾಖಲಿಸಿದ್ದಾರೆ. ಆದರೆ, ತೋಮರ್, ‘‘ಈ ವಿಷಯದ ಕುರಿತು ಕೃಷಿ ಸಚಿವಾಲಯದಲ್ಲಿ ಯಾವುದೇ ದಾಖಲೆ ಇಲ್ಲ. ಆದುದರಿಂದ ಪರಿಹಾರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’’ ಎಂದು ಹೇಳಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ಇನ್ನೂ ಈಡೇರದೆ ಉಳಿದ 6 ಬೇಡಿಕೆಗಳ ಪಟ್ಟಿಯನ್ನು ಮಾಡಿದೆ. ಪ್ರತಿಭಟನೆ ಸಂದರ್ಭ ಪ್ರಾಣ ಕಳೆದುಕೊಂಡ ಎಲ್ಲ ರೈತರಿಗೆ ಸ್ಮಾರಕ ನಿರ್ಮಿಸಬೇಕು ಎಂಬುದು ಕೂಡ ಒಂದು ಬೇಡಿಕೆ. ಪ್ರಾಣ ಕಳೆದುಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ಮರು ಉಚ್ಚರಿಸಿದ್ದಾರೆ.

ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳು ಈಗಲೂ ನ್ಯಾಯ ಕೋರುತ್ತಿವೆ. ರೈತರ ಅಹವಾಲುಗಳಿಗೆ ಸರಕಾರ ಹಿಂದೆಯೇ ಪ್ರತಿಕ್ರಿಯಿಸುತ್ತಿದ್ದರೆ ಹಾಗೂ ಅವರ ಕಳವಳವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರೆ, ಬಹುಶಃ ಜೀವಗಳನ್ನು ಉಳಿಸಬಹುದಿತ್ತು ಎಂದು ‘ವೈರ್’ ವರದಿಯಲ್ಲಿ ಹೇಳಿದೆ. ಪ್ರತಿಭಟನೆ ಸಂದರ್ಭ ಪ್ರಾಣ ಕಳೆದುಕೊಂಡ ರೈತರ ಕುಟುಂಬಕ್ಕೆ ತೆಲಂಗಾಣ ಸರಕಾರ ಮಾತ್ರ ತಲಾ 3 ಲಕ್ಷ ಪರಿಹಾರ ಧನ ಘೋಷಿಸಿದೆ. ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಮೃತಪಟ್ಟ ರೈತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಧನ ನೀಡಲಾಗುವುದು ಎಂದು ಸಮಾಜವಾದಿ ಪಕ್ಷ ಭರವಸೆ ನೀಡಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News