ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಕಾಮಿಡಿಯನ್ ಕುನಾಲ್ ಕಾಮ್ರ ಕಾರ್ಯಕ್ರಮ ರದ್ದು
ಮುಂಬೈ: ಮುಂದಿನ 20 ದಿನಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿವೆ ಎಂದು ಕಾಮಿಡಿಯನ್ ಕುನಾಲ್ ಕಾಮ್ರ ಟ್ವೀಟ್ ಮೂಲಕ ತಿಳಿಸಿದ್ದಾರೆ.
"ಅವುಗಳನ್ನು ಎರಡು ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ. ಮೊದಲನೆಯದಾಗಿ, ಹೆಚ್ಚು ಜನರು ಆಸೀನರಾಗಬಹುದಾದ ಸ್ಥಳದಲ್ಲಿ 45 ಜನರು ಆಸೀನರಾಗಲು ನಮಗೆ ವಿಶೇಷ ಅನುಮತಿಗಳು ದೊರಕಿಲ್ಲ. ಎರಡನೆಯದಾಗಿ, ನಾನು ಅಲ್ಲಿ ಕಾರ್ಯಕ್ರಮ ನೀಡಿದರೆ ಸ್ಥಳವನ್ನೇ ಮುಚ್ಚಲಾಗುವುದು ಎಂದು ಬೆದರಿಕೆಯೊಡ್ಡಲಾಗಿದೆ. ಇದು ಕೂಡ ಕೋವಿಡ್ ಮಾರ್ಗಸೂಚಿಗಳು ಮತ್ತು ಹೊಸ ನಿಯಮಗಳ ಭಾಗವಾಗಿರಬೇಕು ಎಂದು ನಾನಂದುಕೊಂಡಿದ್ದೇನೆ. ನನ್ನನ್ನು ಕೂಡ ವೈರಾಣುವಿನ ಒಂದು ರೂಪಾಂತರಿ ಎಂದು ತಿಳಿಯಲಾಗಿದೆ ಎಂದೆನಿಸುತ್ತದೆ,'' ಎಂದು ಕಾಮ್ರಾ ಬರೆದಿದ್ದಾರೆ.
"ಫಾರೂಕಿಗೆ ಕಾಮಿಡಿ ತೊರೆಯುವಂತಾದ ಸನ್ನಿವೇಶದಲ್ಲಿ ಕಾಮ್ರಾ ಒಬ್ಬ ಹೇಗೆ ಪ್ರದರ್ಶನ ನೀಡಬಹುದು ಎಂದು ಚಿಂತಿಸುತ್ತಿರುವವರಿಗೆ ಒಂದು ಸಮಾಧಾನದ ವಿಷಯವೆಂದರೆ ಆಡಳಿತ ವರ್ಗ ಈ ರೀತಿ ದಮನಕಾರಿ ನೀತಿಯಲ್ಲೂ ಸಮಾನತೆ ಪ್ರದರ್ಶಿಸಿದೆ. ಈ ರೀತಿ ಸಮಾನ ದಮನಿಸುವಿಕೆ ಹಾದಿಯಲ್ಲಿ ನಾವು ಮುಂದುವರಿದರೆ ಮುಂದೆ ಸಮಾನ ಸ್ವಾತಂತ್ರ್ಯದ ಹಂತಕ್ಕೆ 'ಕ್ಲೈಮೇಟ್ ಚೇಂಜ್' ನಂತರದ ಯುಗದಲ್ಲಿ ನಾವು ಪ್ರವೇಶಿಸಬಹುದು,'' ಎಂದು ಅವರು ಬರೆದಿದ್ದಾರೆ.
ಒಂದು ಶೋ ರದ್ದುಗೊಳಿಸಲು ಏನು ಮಾಡಬೇಕೆಂಬುದನ್ನು ವಿಡಂಬನಾತ್ಮಕವಾಗಿ ಬಣ್ಣಿಸಿರುವ ಕಾಮ್ರ "ಹಿಂಸೆಯುಂಟಾಗಬಹುದೆಂದು ಪೊಲೀಸರಿಗೆ ತಿಳಿಸಿ'' ಹಾಗೂ "ನಿಮ್ಮ ವಿಜಯ ಮತ್ತು ಏಕತೆಯನ್ನು ತೋರಿಸಲು ಮೀಮ್ಸ್ ಜತೆಗೆ ಸಿದ್ಧರಾಗಿ,'' ಎಂದು ಬರೆದಿದ್ದಾರೆ.
"ಯಾವುದೇ ಕಲಾವಿದನ ಕಲೆ ನಿಮಗೆ ಇಷ್ಟವಾಗದೇ ಇದ್ದರೆ ಇದೇ ಸೂತ್ರವನ್ನು ಅನುಸರಿಸಬಹುದು, ಜತೆಗೆ ನಿಮ್ಮನ್ನು ವ್ಯಸ್ತರಾಗಿರಿಸಲು ಹಾಗೂ ಜೀವನವನ್ನು ಉತ್ಸಾಹಭರಿತವಾಗಿಸಲು ಇದನ್ನು ಬಳಸಬಹುದು,'' ಎಂದೂ ಅವರು ಬರೆದಿದ್ದಾರೆ.