"ಚರಿತ್ರೆಯ ಪಠ್ಯಪುಸ್ತಕಗಳು ನಾಲ್ಕು ವೇದಗಳನ್ನು ಮತ್ತು 1947ರ ನಂತರದ ಘಟನೆಗಳನ್ನು ಒಳಗೊಂಡಿರಬೇಕು"

Update: 2021-12-01 13:36 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ,ಡಿ.1: ಚರಿತ್ರೆಯ ಪಠ್ಯಪುಸ್ತಕಗಳನ್ನು ನಿರಂತರವಾಗಿ ಪರಿಷ್ಕರಿಸುತ್ತಿರಬೇಕು ಮತ್ತು ಸ್ವಾತಂತ್ರೋತ್ತರ ಇತಿಹಾಸವನ್ನು ಸಹ ಪರಿಗಣಿಸಬೇಕು ಎಂದು ಸಂಸದೀಯ ಸಮಿತಿಯೊಂದು ಸರಕಾರಕ್ಕೆ ಶಿಫಾರಸು ಮಾಡಿದೆ. ನಾಲ್ಕು ವೇದಗಳಾದ ಸಾಮವೇದ,ಯಜುರ್ವೇದ,ಅಥರ್ವವೇದ ಮತ್ತು ಋಗ್ವೇದ ಹಾಗೂ ಭಗವದ್ಗೀತೆಯ ಜ್ಞಾನವೂ ಪಠ್ಯಕ್ರಮದ ಭಾಗವಾಗಿರಬೇಕು. ಆಗಮ ಸಾಹಿತ್ಯದ ಭಾಗಗಳನ್ನು (ಮಹಾವೀರರ ಉಪದೇಶ ಸೇರಿದಂತೆ ಜೈನಧರ್ಮದ ಗ್ರಂಥಗಳು) ಸಹ ಸೇರಿಸಬೇಕು ಎಂದು ಸಮಿತಿಯು ತನ್ನ ಶಿಫಾರಸುಗಳಲ್ಲಿ ಹೇಳಿದೆ ಎಂದು theprint.in ವರದಿ ಮಾಡಿದೆ.

ವಿನಯ ಸಹಸ್ರಬುದ್ಧೆ ನೇತೃತ್ವದ ಶಿಕ್ಷಣ, ಮಹಿಳೆಯರು ಮತ್ತು ಮಕ್ಕಳು, ಯುವಜನ ಮತ್ತು ಕ್ರೀಡೆಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಮಂಗಳವಾರ ರಾಜ್ಯಸಭೆಯಲ್ಲಿ ಮಂಡಿಸಲಾದ ತನ್ನ ವರದಿಯಲ್ಲಿ ಈ ಶಿಫಾರಸುಗಳನ್ನು ಮಾಡಿದೆ.

‘ನಮ್ಮ ಚರಿತ್ರೆಯ ಪಠ್ಯಪುಸ್ತಕಗಳನ್ನು ನಿರಂತರವಾಗಿ ನವೀಕರಿಸುತ್ತಿರಬೇಕು ಮತ್ತು 1947ರ ನಂತರದ ಇತಿಹಾಸವನ್ನು ಅವು ಪರಿಗಣಿಸಬೇಕು. ಜೊತೆಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ನಿಯಮಿತ ಮಧ್ಯಂತರಗಳಲ್ಲಿ ಪುನರ್ಪರಿಶೀಲಿಸುವ ಆಯ್ಕೆಯನ್ನು ಮುಕ್ತವಾಗಿಟ್ಟುಕೊಳ್ಳಬೇಕು’ ಎಂದು ವರದಿಯು ಹೇಳಿದೆ.

ವಿವಿಧ ಯುಗಗಳು, ಅವಧಿಗಳು ಮತ್ತು ಘಟನೆಗಳಿಗೆ ಸಮಾನ ಪ್ರಾಶಸ್ತ್ಯ ಮತ್ತು ಮಹತ್ವವನ್ನು ನೀಡುವಂತಾಗಲು ಎನ್ಸಿಇಆರ್ಟಿಯು ಚರಿತ್ರೆಯ ಪಠ್ಯಪುಸ್ತಕಗಳ ರಚನೆಗಾಗಿ ಮಾರ್ಗಸೂಚಿಗಳನ್ನು ಪುನರ್ಪರಿಶೀಲಿಬೇಕು ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.

ಈವರೆಗೆ ಸೂಕ್ತ ಪ್ರಾತಿನಿಧ್ಯ ದೊರೆಯದಿರುವ ದೇಶಾದ್ಯಂತದ ವಿವಿಧ ಗತ ಭಾರತೀಯ ಸಾಮ್ರಾಜ್ಯಗಳ ಕುರಿತೂ ಬೋಧಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. ಎನ್ಸಿಇಆರ್ಟಿಯ ಪುಸ್ತಕಗಳು ವಿಕ್ರಮಾದಿತ್ಯ, ಚೋಳರು, ಚಾಲುಕ್ಯರು, ವಿಜಯನಗರ, ಗೊಂಡ್ವಾನಾ ಅಥವಾ ತಿರುವಾಂಕೂರು ಮತ್ತು ಈಶಾನ್ಯ ಭಾರತದ ಅಹೋಮ್ಗಳಂತಹ ಕೆಲವು ಮಹಾನ್ ಭಾರತೀಯ ಸಾಮ್ರಾಜ್ಯಗಳನ್ನು ಒಳಗೊಂಡಿಲ್ಲ ಎನ್ನುವುದನ್ನು ಗಮನಿಸಲಾಗಿದೆ ಎಂದು ಅದು ಹೇಳಿದೆ.

ಎನ್ಸಿಇಆರ್ಟಿ ಮತ್ತು ರಾಜ್ಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿ(ಎಸ್ಸಿಇಆರ್ಟಿ)ಗಳು ಶಾಲಾ ಪಠ್ಯಕ್ರಮದಲ್ಲಿ ವೇದಗಳು ಮತ್ತು ಇತರ ಶ್ರೇಷ್ಠ ಭಾರತೀಯ ಗ್ರಂಥಗಳಿಂದ ಪ್ರಾಚೀನ ಬುದ್ಧಿವಂತಿಕೆ, ಜೀವನ ಮತ್ತು ಸಮಾಜದ ಕುರಿತು ಜ್ಞಾನ ಮತ್ತು ಬೋಧನೆಗಳನ್ನು ಸೇರಿಸಬೇಕು ಎಂದು ಹೇಳಿರುವ ವರದಿಯು, ನಲಂದಾ, ವಿಕ್ರಮಶಿಲಾ ಮತ್ತು ತಕ್ಷಶಿಲಾಗಳಂತಹ ವಿವಿಗಳು ಅಳವಡಿಸಿಕೊಂಡಿದ್ದ ಶೈಕ್ಷಣಿಕ ಪದ್ಧತಿಗಳ ಅಧ್ಯಯನ ಮಾಡುವಂತೆಯೂ ಹೇಳಿದೆ.

ಸಿಬಿಎಸ್ಇ, ಸಿಐಸಿಎಸ್ಇ ಮತ್ತು ವಿವಿಧ ಇತರ ರಾಜ್ಯ ಶಿಕ್ಷಣ ಮಂಡಳಿಗಳು ಜಾರಿಗೊಳಿಸಬಹುದಾದ ‘ವಿವಿಧ ವಿಷಯಗಳಿಗಾಗಿ ಮುಖ್ಯ ತರಗತಿವಾರು ಸಾಮಾನ್ಯ ಪಠ್ಯಕ್ರಮ’ವನ್ನು ರೂಪಿಸುವ ಸಾಧ್ಯತೆಯನ್ನು ಅನ್ವೇಷಿಸುವಂತೆಯೂ ಸಮಿತಿಯು ಶಿಕ್ಷಣ ಸಚಿವಾಲಯಕ್ಕೆ ಸೂಚಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News