ಸಂತ್ರಸ್ತೆಯ ಸಾಕ್ಷಿಯ ಏಕೈಕ ಆಧಾರದಲ್ಲಿ ಅತ್ಯಾಚಾರ ಆರೋಪಿಯನ್ನು ದೋಷಿಯೆಂದು ಘೋಷಿಸಬಹುದು: ಪುನರುಚ್ಚರಿಸಿದ ಸುಪ್ರೀಂ

Update: 2021-12-01 17:11 GMT

ಹೊಸದಿಲ್ಲಿ,ಡಿ.1: ಸಂತ್ರಸ್ತೆಯು ವಿಶ್ವಾಸಾರ್ಹ ಮತ್ತು ನಂಬಿಕಸ್ಥಳು ಎಂದು ಕಂಡುಬಂದರೆ ಆಕೆಯ ಸಾಕ್ಷದ ಏಕೈಕ ಆಧಾರದಲ್ಲಿ ಅತ್ಯಾಚಾರ ಆರೋಪಿಯನ್ನು ದೋಷಿಯೆಂದು ಘೋಷಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಮತ್ತೆ ಎತ್ತಿಹಿಡಿದಿದೆ.

ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ನಿಲುವನ್ನು ಪುನರುಚ್ಚರಿಸಿದೆ. ಪ್ರಾಸಿಕ್ಯೂಷನ್ ಪ್ರಕರಣವು ದೂರುದಾರಳ ಹೇಳಿಕೆಯನ್ನೇ ಸಂಪೂರ್ಣವಾಗಿ ಆಧರಿಸಿದೆ ಮತ್ತು ಇತರ ಯಾವುದೇ ಸ್ವತಂತ್ರ ಸಾಕ್ಷಿಯನ್ನು ಪರೀಕ್ಷಿಸಿಲ್ಲ ಅಥವಾ ಅಂತಹ ಯಾವುದೇ ಸಾಕ್ಷಿ ಪ್ರಕರಣವನ್ನು ಬೆಂಬಲಿಸಿಯೂ ಇಲ್ಲ ಎಂದು ಅತ್ಯಾಚಾರ ಪ್ರಕರಣದಲ್ಲಿ ದೋಷನಿರ್ಣಯಕ್ಕೊಳಗಾಗಿರುವ ವ್ಯಕ್ತಿ ವಾದಿಸಿದ್ದ.

ವಾದವನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಎಂ.ಆರ್.ಶಾ ಮತ್ತು ಸಂಜೀವ ಖನ್ನಾ ಅವರ ಪೀಠವು,ದೂರುದಾರ ಮಹಿಳೆ ಪ್ರಾಸಿಕ್ಯೂಷನ್ ಪ್ರಕರಣವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾಳೆ ಮತ್ತು ಆರಂಭದಿಂದಲೂ ಸ್ಥಿರ ನಿಲುವು ತೋರಿಸಿದ್ದಾಳೆ ಎಂದು ಬೆಟ್ಟು ಮಾಡಿತು. ತಮ್ಮ ಅಭಿಪ್ರಾಯವನ್ನು ಪುಷ್ಟೀಕರಿಸಲು ಹಿಂದಿನ ತೀರ್ಪಗಳನ್ನು ನ್ಯಾಯಾಧೀಶರು ಉಲ್ಲೇಖಿಸಿದರು.

ಹಾಲಿ ಪ್ರಕರಣದಲ್ಲಿ ದೂರುದಾರಳ ವಿಶ್ವಾಸಾರ್ಹತೆಯನ್ನು ಶಂಕಿಸಲು ಯಾವುದೇ ಕಾರಣವಿಲ್ಲ. ಆಕೆ ವಿಶ್ವಾಸಾರ್ಹ ಮತ್ತು ನಂಬಿಕಸ್ಥಳಾಗಿದ್ದಾಳೆ ಎನ್ನುವುದು ದೃಢಪಟ್ಟಿದೆ. ಹೀಗಾಗಿ ಇನ್ನಷ್ಟು ದೃಢೀಕರಣದ ಅಗತ್ಯವಿಲ್ಲದೆ ಸಂತ್ರಸ್ತೆಯ ಹೇಳಿಕೆಯ ಏಕೈಕ ಆಧಾರದಲ್ಲಿ ದೋಷನಿರ್ಣಯವು ಸಮಂಜಸವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News