ಬೆಲ್ಜಿಯಂ ವಿರುದ್ಧ ಭಾರತಕ್ಕೆ ಜಯ, ಸೆಮಿಫೈನಲ್ ನಲ್ಲಿ ಜರ್ಮನಿ ಎದುರಾಳಿ

Update: 2021-12-01 18:28 GMT
photo:PTI

 ಭುವನೇಶ್ವರ, ಡಿ.1:ಗೋಲ್ ಕೀಪರ್ ಪವನ್ ವೀರೋಚಿತ ಪ್ರದರ್ಶನ ಹಾಗೂ ಶಾರದಾನಂದ ತಿವಾರಿ ಬಾರಿಸಿದ ಏಕೈಕ ಗೋಲು ನೆರವಿನಿಂದ ಹಾಲಿ ಚಾಂಪಿಯನ್ ಭಾರತವು ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಬೆಲ್ಜಿಯಂ ತಂಡವನ್ನು 1-0 ಗೋಲು ಅಂತರದಿಂದ ಮಣಿಸಿತು. ಇದರೊಂದಿಗೆ ಸೆಮಿ ಫೈನಲ್ ಪ್ರವೇಶಿಸಿತು. ಶುಕ್ರವಾರ ಸೆಮಿಫೈನಲ್‌ನಲ್ಲಿ 6 ಬಾರಿ ಚಾಂಪಿಯನ್ ಜರ್ಮನಿಯಿಂದ ಕಠಿಣ ಸವಾಲನ್ನು ಎದುರಿಸಲಿದೆ.

ಭಾರತವು ಬೆಲ್ಜಿಯಂ ವಿರುದ್ಧ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಐದರಲ್ಲೂ ಜಯ ಸಾಧಿಸಿ ಅಜೇಯ ದಾಖಲೆಯನ್ನು ಕಾಯ್ದುಕೊಂಡಿದೆ. ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶಾರದಾನಂದ ತಿವಾರಿ 21ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ಮೊದಲಾರ್ಧದ ಅಂತ್ಯಕ್ಕೆ ಭಾರತವು 1-0 ಮುನ್ನಡೆ ಕಾಯ್ದುಕೊಂಡಿತು. 3ನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ದೊಡ್ಡ ಅವಕಾಶ ಪಡೆದಿತ್ತು. ಆದರೆ ಭಾರತದ ಗೋಲ್‌ಕೀಪರ್ ಪವನ್ ಅಮೋಘ ಪ್ರಯತ್ನದಿಂದ ಗೋಲು ನಿರಾಕರಿಸಿದರು. ಬೆಲ್ಜಿಯಂ 52ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ ಇದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು. 57ನೇ ನಿಮಿಷದಲ್ಲಿ ಗೋಲ್‌ಕೀಪರ್ ಪವನ್ ಭಾರತದ ರಕ್ಷಣೆಗೆ ಮುಂದಾಗಿ ಕೊನೆಯ ತನಕ 1-0 ಮುನ್ನಡೆ ಕಾಪಾಡಿಕೊಳ್ಳಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News