​ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಪ್ರಮಾದ : 15 ಮಂದಿಗೆ ದೃಷ್ಟಿ ನಾಶ

Update: 2021-12-02 01:38 GMT

ಮುಝಫ್ಫರ್‌ ಪುರ: ಉತ್ತರ ಬಿಹಾರದ ಆಸ್ಪತ್ರೆಯೊಂದರಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಉಂಟಾದ ಪ್ರಮಾದದಿಂದಾಗಿ 15 ಮಂದಿ ದೃಷ್ಟಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಉಚಿತ ಶಸ್ತ್ರಚಿಕಿತ್ಸೆ ಶಿಬಿರ ನೆರವೇರಿಸಿದ ಈ ಆಸ್ಪತ್ರೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.

ಮುಝಫ್ಫರ್‌ ಪುರ ಕಣ್ಣಿನ ಆಸ್ಪತ್ರೆಯಲ್ಲಿ ನಡೆದ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ತಂಡ ರಚಿಸಲಾಗಿದೆ ಎಂದು ಮುಝಫ್ಫರ್‌ ಪುರ ಸಿವಿಲ್ ಸರ್ಜನ್ ವಿನಯ್ ಕುಮಾರ್ ಶರ್ಮಾ ಹೇಳಿದ್ದಾರೆ.

"ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಫಲಾನುವಿಗಳ ಪಟ್ಟಿಯನ್ನು ಕೇಳಲಾಗಿದೆ. ಇದುವರೆಗೆ ಕನಿಷ್ಠ 15 ಮಂದಿಗೆ ಶಸ್ತ್ರಚಿಕಿತ್ಸೆ ಬಳಿಕ ಆಗಿರುವ ಸಮಸ್ಯೆಯಿಂದ ದೃಷ್ಟಿ ನಾಶವಾಗಿದೆ" ಎಂದು ವಿವರಿಸಿದ್ದಾರೆ.

ನವೆಂಬರ್ 22ರಂದು 65 ಮಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ಈ ಪೈಕಿ ಕೆಲ ಮಂದಿಯಲ್ಲಿ ಸಮಸ್ಯೆ ಕಂಡುಬಂದಿದೆ. ನಾಲ್ಕು ಮಂದಿಯ ದೃಷ್ಟಿ ಸೋಂಕಿನ ಕಾರಣದಿಂದಾಗಿ ನಾಶವಾಗಿದೆ. ಇತರರ ದೃಷ್ಟಿ ಉಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿಯ ಸದಸ್ಯರೊಬ್ಬರು ವಿವರಿಸಿದ್ದಾರೆ.

ಪರಿಣತ ವೈದ್ಯರೇ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಶಿಬಿರದಲ್ಲಿ ನೈರ್ಮಲ್ಯ ಕಾಪಾಡದಿರುವ ಬಗ್ಗೆ ಮತ್ತು ಪ್ರತಿ ವೈದ್ಯರು ಎಷ್ಟು ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡಿಲ್ಲ. ಆದರೆ ಕೆಲ ಅನಧಿಕೃತ ಮೂಲಗಳ ಪ್ರಕಾರ ಒಟ್ಟು 250 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ತೊಂದರೆಗೀಡಾದವರು ಬಹುತೇಕ ಜಿಲ್ಲೆಯ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಬಡವರು ಹಾಗೂ ಗ್ರಾಮಸ್ಥರು.

ಮಾಜಿ ಸಂಸದ ಪಪ್ಪು ಯಾದವ್ ಆಸ್ಪತ್ರೆಗೆ ಭೇಟಿ ನೀಡಿ, ಘಟನೆ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಜತೆಗೆ ದೃಷ್ಟಿ ಕಳೆದುಕೊಂಡ ಪ್ರತಿ ರೋಗಿಗಳಿಗೆ ಎರಡು ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News