'ಮಂಗಳಾ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್'ನ ಹಾಸ್ಟೆಲ್‌ನಲ್ಲಿ ಡ್ರಗ್ಸ್ ಹಾವಳಿ: ವಿದ್ಯಾರ್ಥಿಯ ಆರೋಪ

Update: 2021-12-02 05:56 GMT
ಸಾಂದರ್ಭಿಕ ಚಿತ್ರ (Photo: freepressjournal.in)

ಮಂಗಳೂರು, ಡಿ.2: ನಗರ ಹೊರವಲಯದ ನೀರುಮಾರ್ಗ ರಸ್ತೆಯ ವಿದ್ಯಾನಗರ ಕ್ಯಾಂಪಸ್‌ನಲ್ಲಿರುವ ಮಂಗಳಾ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸಯನ್ಸ್‌ನ ಹಾಸ್ಟೆಲ್‌ನಲ್ಲಿ ಡ್ರಗ್ಸ್ ಹಾವಳಿ ಇದೆ ಎಂದು ಈ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮಡಿಕೇರಿಯ ಆಝಾದ್ ನಗರದ ಮುಹಮ್ಮದ್ ಅಫ್ವಾನ್ ಎಂಬವರು ಆರೋಪಿಸಿದ್ದಾರೆ. ಅಲ್ಲದೆ ತನಗಾದ ಕಹಿ ಅನುಭವದ ವೀಡಿಯೊ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ಹಂಚಿಕೊಂಡಿದ್ದಾರೆ.

"ಮಂಗಳಾ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಮೂರು ವರ್ಷ, ಮೂರು ತಿಂಗಳ ಡಿಪ್ಲೊಮಾ ಮೆಡಿಕಲ್ ಲ್ಯಾಬ್ ಕೋರ್ಸ್‌ಗಾಗಿ ನಾನು 15 ಸಾವಿರ ರೂ. ಮುಂಗಡ ಶುಲ್ಕ ಪಾವತಿಸಿ ಸೇರ್ಪಡೆಗೊಂಡಿದ್ದೆ. ಅಲ್ಲದೆ ಹಾಸ್ಟೆಲ್ ಶುಲ್ಕ 2,400 ರೂ.ವನ್ನು ಕೂಡ ಪಾವತಿಸಿದ್ದೆ. ನ.28ರಂದು ಹಾಸ್ಟೆಲ್‌ಗೆ ಹೋಗಿದ್ದೆ. ಸೋಮವಾರ ಮತ್ತು ಮಂಗಳವಾರವೂ ಹಾಸ್ಟೆಲ್‌ನಲ್ಲಿದ್ದೆ. ಮಂಗಳವಾರ ಕಾಲೇಜಿನ ತರಗತಿಗೆ ಹಾಜರಾಗಿದ್ದೆ. ನಾನಿದ್ದ ಹಾಸ್ಟೆಲ್‌ನ ಕೋಣೆಯಲ್ಲಿ ಕೇರಳದ ನಾಲ್ವರು ವಿದ್ಯಾರ್ಥಿಗಳಿದ್ದರು. ಎಲ್ಲರೂ ಡ್ರಗ್ಸ್ ಮತ್ತು ಅಮಲು ಪದಾರ್ಥ ಸೇವನೆ ಮಾಡುತ್ತಿದ್ದರು. ಸಿಗರೇಟ್ ಸೇದುತ್ತಿದ್ದರು. ಮಾದಕ ದ್ರವ್ಯಗಳನ್ನು ರೂಮಿನಲ್ಲೇ ಶೇಖರಿಸಿಡುತ್ತಿದ್ದರು. ಮೊದಲ ದಿನವೇ ನನಗೆ ಡ್ರಗ್ಸ್ ಸೇವಿಸಲು, ಸಿಗರೇಟ್ ಸೇದಲು ಒತ್ತಾಯಿಸಿದರು. ನಾನು ನಯವಾಗಿ ನಿರಾಕರಿಸಿದೆ. ಬಳಿಕ ನನ್ನನ್ನು ರ್‍ಯಾಗಿಂಗ್‌ ಮಾಡಲು ಯತ್ನಿಸಿದರು. ನಾನು ಕೂಡ ಮಂಗಳೂರು ಮೂಲದವನೇ. ರ್‍ಯಾಗಿಂಗ್‌ ಮಾಡಿದರೆ ಪೊಲೀಸರಿಗೆ ದೂರು ಕೊಡುವೆ ಎಂದು ಎಚ್ಚರಿಸಿದಾಗ ಸುಮ್ಮನಾದರು. ಬಳಿಕ ನಾನು ಈ ವಿಚಾರವನ್ನು ಕಾಲೇಜಿನ ಮುಖ್ಯಸ್ಥ ಗಮನಕ್ಕೆ ತಂದಿದ್ದೆ. ಆದರೆ ಅವರು ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ಸಿಎಫ್‌ಐ ಸಂಘಟನೆಯ ಮುಖಂಡರು ಮತ್ತು ಹೆತ್ತವರ ಸಮ್ಮುಖ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಬುಧವಾರ ಭೇಟಿ ಮಾಡಿ ವಿಷಯ ತಿಳಿಸಿದೆ. ಕಾಲೇಜು ಮುಖ್ಯಸ್ಥರು ಸ್ಪಂದಿಸದ ಕಾರಣ ಕಾಲೇಜು ತ್ಯಜಿಸುವ ನಿರ್ಧಾರಕ್ಕೆ ಬಂದೆ‌. ಅದರಂತೆ ನನ್ನ ಟಿ.ಸಿ. ಮತ್ತು ಮಾರ್ಕ್ ಕಾರ್ಡ್ ಹಾಗೂ ತಾನು ಪಾವತಿಸಿದ ಶುಲ್ಕವನ್ನು ಮರಳಿಸುವಂತೆ ಮನವಿ ಮಾಡಿದೆ. ಆರಂಭದಲ್ಲಿ ಅದನ್ನೆಲ್ಲಾ ಮರಳಿಸಲು ನಿರಾಕರಿಸಿದ ಕಾಲೇಜಿನ ಮುಖ್ಯಸ್ಥರು ಬಳಿಕ ಟಿ.ಸಿ. ಮತ್ತು ಮಾರ್ಕ್ ಕಾರ್ಡ್ ಕೊಟ್ಟರು. ಆದರೆ ಶುಲ್ಕ ಮರಳಿಸಲು ನಿರಾಕರಿಸಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲು ಚಿಂತಿಸಿದ್ದೇನೆ ಎಂದು ಮುಹಮ್ಮದ್ ಅಫ್ವಾನ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.


"ಆರೋಪದಲ್ಲಿ ಯಾವುದೇ ಹುರುಳಿಲ್ಲ"
"ವಿದ್ಯಾರ್ಥಿ ಮುಹಮ್ಮದ್ ಅಫ್ವಾನ್‌ನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಲ್ಲದೆ ಹಾಸ್ಟೆಲ್‌ನಲ್ಲೂ ಅಂತಹ ಯಾವುದೇ ಕೆಟ್ಟ ಅಭ್ಯಾಸಗಳಿಗೆ ಅವಕಾಶವಿಲ್ಲ. ಪ್ರತೀ ದಿನ ಕಾವಲುಗಾರ, ವಾರ್ಡನ್ ಹಾಸ್ಟೆಲ್‌ನ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ ನಿಗಾ ಇಟ್ಟಿರುತ್ತಾರೆ. ವಿದ್ಯಾರ್ಥಿಯ ಟಿಸಿ, ಮಾರ್ಕ್‌ಕಾರ್ಡ್ ವಾಪಸ್ ಕೊಟ್ಟಿದ್ದೇವೆ. ಶುಲ್ಕ ಮರಳಿಸಲು ಅವಕಾಶ ಇಲ್ಲ. ಆತನ ಟಿ.ಸಿ., ಮಾರ್ಕ್‌ ಕಾರ್ಡ್ ನೀಡುವಾಗ ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಕ್ಕೂ ಸಹಿ ಹಾಕಿದ್ದಾನೆ. ಮುಹಮ್ಮದ್ ಅಫ್ವಾನ್ ಮಾಡಿದ ಆರೋಪಕ್ಕೆ ಸಂಬಂಧಿಸಿ ಬಹುತೇಕ ವಿದ್ಯಾರ್ಥಿಗಳನ್ನು ವಿಚಾರಿಸಿದ್ದೇವೆ" ಎಂದು ಮಂಗಳಾ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸಯನ್ಸ್‌ ಕಾಲೇಜಿನ ಪ್ರಾಂಶುಪಾಲೆ ಪ್ರತಿಜ್ಞಾ ಸುಹಾಸಿನಿ‌ ಪ್ರತಿಕ್ರಿಯಿಸಿದ್ದಾರೆ.


"ವಿದ್ಯಾರ್ಥಿಯು ತನ್ನ ಪೋಷಕರ ಜೊತೆಗೂಡಿ ತನ್ನನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು" ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ‌ತಿಳಿಸಿದ್ದಾರೆ.


"ಮಗನಿಗೆ ಹಾಸ್ಟೆಲ್‌ನಲ್ಲಿ ಕಹಿ ಅನುಭವ ಆದ ತಕ್ಷಣ ನನಗೆ ಕರೆ ಮಾಡಿ ವಿಷಯ‌ ತಿಳಿಸಿದ. ಅದರಂತೆ ನಾನು ಬುಧವಾರ ಕಾಲೇಜಿಗೆ‌ ಹೋಗಿದ್ದೆ. ಆದರೆ ನನಗೆ ಪ್ರಾಂಶುಪಾಲರ ಜೊತೆ ಮಾತನಾಡಲು ಅವಕಾಶ ಸಿಗಲಿಲ್ಲ. ನನಗೆ ನನ್ನ ಮಗನ ಮಾತಿನ ಮೇಲೆ ಸಂಪೂರ್ಣ ವಿಶ್ವಾಸವಿದೆ. ಆಧಾರವಿಲ್ಲದೆ ಅವ ಏನನ್ನೂ ಹೇಳುವವನಲ್ಲ. ಈಗ ಕಾಲೇಜಿನವರು ಪ್ರತಿಷ್ಠೆ ಉಳಿಸಿಕೊಳ್ಳಲು ನಿರಾಕರಿಸಬಹುದು" ಎಂದು ವಿದ್ಯಾರ್ಥಿಯ ತಾಯಿ ಆಮಿನಾ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News