24 ಗಂಟೆಗಳಲ್ಲಿ ಗಂಭೀರ ಕ್ರಮಕೈಗೊಳ್ಳಿ, ಸಾಧ್ಯವಾಗದಿದ್ದರೆ ಅದನ್ನು ನಾವು ಮಾಡುತ್ತೇವೆ: ಸುಪ್ರೀಂ ಕೋರ್ಟ್

Update: 2021-12-02 08:03 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಭಾಯಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಅಸಮಾಧಾನವನ್ನು ಹೊರಹಾಕಿದ ಸುಪ್ರೀಂ ಕೋರ್ಟ್, ಶುಕ್ರವಾರದೊಳಗೆ ಕೆಲವು ಸಮರ್ಥ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಕೇಂದ್ರ ಹಾಗೂ ದಿಲ್ಲಿ ಸರಕಾರಕ್ಕೆ ಗುರುವಾರ ಸೂಚಿಸಿದ್ದು, ಇದರಲ್ಲಿ ವಿಫಲವಾದರೆ ತಾನು ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

"ನಾವು ಅದನ್ನು ನಾಳೆ ಬೆಳಿಗ್ಗೆ ತೆಗೆದುಕೊಳ್ಳುತ್ತೇವೆ ... ದಯವಿಟ್ಟು ನಂತರ ಪ್ರತಿಕ್ರಿಯಿಸಿ. ಇಲ್ಲದಿದ್ದರೆ ನಮ್ಮನ್ನು ಒತ್ತಾಯಿಸಬೇಡಿ... ನಾವು ಗಂಭೀರ ಕ್ರಮವನ್ನು ನಿರೀಕ್ಷಿಸುತ್ತೇವೆ. ನಿಮಗೆ ಸಾಧ್ಯವಾಗದಿದ್ದರೆ, ನಾವು ಅದನ್ನು ಮಾಡುತ್ತೇವೆ. ನೀವು ಆದೇಶವನ್ನು ಬಯಸಿದರೆ, ನಾವು ನಿಮಗೆ ಆದೇಶವನ್ನು ನೀಡುತ್ತೇವೆ. ನಿಮ್ಮ ಸರಕಾರವನ್ನು ಆಡಳಿತ ನಡೆಸಲು ನಾವು ಯಾರನ್ನಾದರೂ ನೇಮಿಸುತ್ತೇವೆ ”ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಮಾಲಿನ್ಯವನ್ನು ನಿಯಂತ್ರಿಸಲು ಕ್ರಮಗಳನ್ನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹೇಳಿದರು.

"ಏನೂ ಆಗುತ್ತಿಲ್ಲ ಹಾಗೂ  ಮಾಲಿನ್ಯ ಹೆಚ್ಚುತ್ತಲೇ ಇದೆ ಎಂದು ನಾವು ಭಾವಿಸುತ್ತೇವೆ... ಸಮಯ ಮಾತ್ರ ವ್ಯರ್ಥವಾಗುತ್ತಿದೆ" ಎಂದು ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಹೇಳಿದರು.

ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತ ನಗರಗಳ ವಾಯು ಬಿಕ್ಕಟ್ಟಿನ ಕುರಿತು ಸತತ ನಾಲ್ಕನೇ ವಾರ ನ್ಯಾಯಾಲಯವು ವಾದಗಳನ್ನು ಆಲಿಸಿದೆ.

ಕಠಿಣ ಕ್ರಮದ ಎಚ್ಚರಿಕೆ ನೀಡಿದ ನ್ಯಾಯಾಲಯ, ಕೈಗಾರಿಕಾ ಹಾಗೂ ವಾಹನ ಮಾಲಿನ್ಯದ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ದಿಲ್ಲಿಗೆ 24 ಗಂಟೆಗಳ ಕಾಲಾವಕಾಶ ನೀಡಿದೆ.

ಶಾಲೆಗಳ ಪುನರಾರಂಭದ ಕುರಿತು ಅರವಿಂದ್ ಕೇಜ್ರಿವಾಲ್ ಸರಕಾರವನ್ನು ಟೀಕಿಸಿದ ಸುಪ್ರೀಂಕೋರ್ಟ್, "ಮೂರು  ಹಾಗೂ  ನಾಲ್ಕು ವರ್ಷದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆದರೆ ವಯಸ್ಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದೆ.

ದಿಲ್ಲಿ ಸರಕಾರವನ್ನು  ಪ್ರತಿನಿಧಿಸುವ ವಕೀಲ ಅಭಿಷೇಕ್ ಮನು ಸಿಂಘ್ವಿ ಈ ಕುರಿತು ಪ್ರತಿಕ್ರಿಯಿಸಿದರು,: "ಶಾಲೆಗಳಲ್ಲಿ, 'ಕಲಿಕೆ ನಷ್ಟ' ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಾವು ಆನ್‌ಲೈನ್‌ನ ಆಯ್ಕೆಯನ್ನು ಒಳಗೊಂಡಂತೆ ಷರತ್ತಿನೊಂದಿಗೆ ಮತ್ತೆ ಶಾಲೆ ತೆರೆದಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News