ಸುಪ್ರೀಂಕೋರ್ಟ್ ತರಾಟೆಯ ಬಳಿಕ ನಾಳೆಯಿಂದ ಶಾಲೆ ಮುಚ್ಚಲು ಮುಂದಾದ ದಿಲ್ಲಿ ಸರಕಾರ

Update: 2021-12-02 08:10 GMT

ಹೊಸದಿಲ್ಲಿ: ವಾಯು ಮಾಲಿನ್ಯದ ಕುರಿತು ಸುಪ್ರೀಂಕೋರ್ಟ್ ನ ಮುಂದಿನ ಆದೇಶದವರೆಗೆ ದಿಲ್ಲಿ ಶಾಲೆಗಳನ್ನು ನಾಳೆಯಿಂದ ಮುಚ್ಚಲಾಗುತ್ತದೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಶಾಲೆಗಳ ಪುನರಾರಂಭದ ಕುರಿತು ಅರವಿಂದ್ ಕೇಜ್ರಿವಾಲ್ ಸರಕಾರವನ್ನು ಇಂದು ಟೀಕಿಸಿದ್ದ ಸುಪ್ರೀಂ ಕೋರ್ಟ್, "ಮೂರು ಹಾಗೂ   ನಾಲ್ಕು ವರ್ಷದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.  ಆದರೆ ವಯಸ್ಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದೆ.

"ವಾಯು ಗುಣಮಟ್ಟ ಸುಧಾರಿಸುವ ಮುನ್ಸೂಚನೆಯನ್ನು ಪರಿಗಣಿಸಿ ನಾವು ಶಾಲೆಗಳನ್ನು ಪುನರಾರಂಭಿಸಿದ್ದೇವೆ. ಆದಾಗ್ಯೂ, ವಾಯು ಮಾಲಿನ್ಯದ ಮಟ್ಟವು ಮತ್ತೆ ಹೆಚ್ಚಾಗಿದೆ ಹಾಗೂ  ಮುಂದಿನ ಆದೇಶದವರೆಗೆ ನಾವು ಶುಕ್ರವಾರದಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ" ಎಂದು ಗೋಪಾಲ್ ರೈ ಹೇಳಿದರು.

ಇಂದು ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್ ಹದಗೆಡುತ್ತಿರುವ ಗಾಳಿಯ ಗುಣಮಟ್ಟಕ್ಕೆ ಮುಖ್ಯ ಕಾರಣವೆಂದು ಪರಿಗಣಿಸಲಾಗಿರುವ ಕೈಗಾರಿಕಾ ಮತ್ತು ವಾಹನ ಮಾಲಿನ್ಯದ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ, ದಿಲ್ಲಿ ಹಾಗೂ  ನೆರೆಯ ರಾಜ್ಯಗಳಿಗೆ 24 ಗಂಟೆಗಳ ಕಾಲಾವಕಾಶ ನೀಡಿತು.  

ಕಳೆದ ತಿಂಗಳು ದೀಪಾವಳಿಯ ನಂತರ ದಿಲ್ಲಿಯ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News