ಕೋವಿಡ್ ನಿಂದ ಆರ್ಥಿಕ ಸಂಕಷ್ಟ: ಉದ್ಯಮಿಗಳ ಆತ್ಮಹತ್ಯೆ ಪ್ರಮಾಣದಲ್ಲಿ ಶೇ. 29ರಷ್ಟು ಹೆಚ್ಚಳ

Update: 2021-12-02 09:08 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ತಂದೊಡ್ಡಿದ ಆರ್ಥಿಕ ಸಂಕಷ್ಟದಿಂದ ಕೃಷಿ ಕ್ಷೇತ್ರಕ್ಕಿಂತ ಹೆಚ್ಚಾಗಿ ಉದ್ಯಮ ಕ್ಷೇತ್ರ ದೊಡ್ಡ ಹೊಡೆತ ಅನುಭವಿಸಿತ್ತು ಎಂದು ಕೇಂದ್ರದ ಅಂಕಿಅಂಶ ತಿಳಿಸಿದೆ. ಕಳೆದ ವರ್ಷವೊಂದರಲ್ಲಿಯೇ ದೇಶದಲ್ಲಿ 11,716 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಕೇಂದ್ರ ಮಂಗಳವಾರ ಸಂಸತ್ತಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. ಕೋವಿಡ್ ಪೂರ್ವ ಸಮಯದಲ್ಲಿ, ಪ್ರಮುಖವಾಗಿ 2019ರಲ್ಲಿ ಆತ್ಮಹತ್ಯೆಗಳಿಗೆ ಹೋಲಿಸಿದಾಗ ಇದು ಶೇ. 29ರಷ್ಟು ಏರಿಕೆಯಾಗಿದೆ ಎಂದು indiatoday.in ವರದಿ ಮಾಡಿದೆ.

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ಅಂಕಿಅಂಶಗಳ ಆಧಾರದಲ್ಲಿ ಈ ಮಾಹಿತಿ ಒದಗಿಸಲಾಗಿದೆ. ಎನ್‌ಸಿಆರ್‌ಬಿಯ "ಆಕ್ಸಿಡೆಂಟ್ಸ್ ಎಂಡ್ ಸುಸೈಡ್ಸ್ ಇನ್ ಇಂಡಿಯಾ'' ವರದಿಯಲ್ಲಿನ ಮಾಹಿತಿಯಂತೆ 2019ರಲ್ಲಿ ದೇಶದಲ್ಲಿ 9,052 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಖ್ಯೆ 2020ರಲ್ಲಿ 11,716ಗೆ ಏರಿಕೆಯಾಗಿದೆ. ಆದರೆ ಆತ್ಮಹತ್ಯೆಗೈದವರು ಸಣ್ಣ ವರ್ತಕರೇ ಅಥವಾ ದೊಡ್ಡ ವರ್ತಕರೇ ಎಂಬ ಕುರಿತು ಎನ್‌ಸಿಆರ್‌ಬಿ ಮಾಹಿತಿ ಸಂಗ್ರಹಿಸುವುದಿಲ್ಲ ಎಂದು ವರದಿಯಾಗಿದೆ.

ಕಳೆದ ವರ್ಷ ವರ್ತಕರ ಆತ್ಮಹತ್ಯೆ ಸಂಖ್ಯೆಗೆ ಹೋಲಿಸಿದಾಗ ರೈತರ ಆತ್ಮಹತ್ಯೆ ಸಂಖ್ಯೆ ಕಡಿಮೆ. ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ ಕಳೆದ ವರ್ಷ 10,677 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ವರ್ಷ ಆತ್ಮಹತ್ಯೆಗೈದ ಉದ್ಯಮಿಗಳ ಪೈಕಿ 4,226 ಮಂದಿ ಮಾರಾಟಗಾರರು, 4,356 ಮಂದಿ ವರ್ತಕರು ಹಾಗೂ ಇತರ ಉದ್ಯಮಗಳಲ್ಲಿ ತೊಡಗಿಕೊಂಡಿದ್ದ 3,134 ಮಂದಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News