ಹಾಸ್ಟೆಲ್‌ಗಳಲ್ಲಿನ ಅಕ್ರಮ; ಎಸಿಬಿಯಿಂದ ತನಿಖೆಗೆ ಆದೇಶ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-12-02 12:49 GMT

ಉಡುಪಿ, ಡಿ.2: ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಅಡುಗೆ ಸಾಮಗ್ರಿಗಳ ಪೂರೈಕೆ ಹಾಗೂ ಟೆಂಡರ್‌ಗಳಲ್ಲಿ ಲೋಪದೋಷಗಳಾಗಿದ್ದು, ಕೆಲವರು ಗರಿಷ್ಠ ವೆಚ್ಚದ ಸಾಮಗ್ರಿಗಳಿಗೆ ಕಡಿಮೆ ವೆಚ್ಚವನ್ನು ನಮೂದಿಸುವ ಮೂಲಕ ಅಕ್ರಮವಾಗಿ ಗುತ್ತಿಗೆ ಪಡೆದುಕೊಂಡಿದ್ದಾರೆ. ಅದೇ ರೀತಿ ಮಕ್ಕಳಿಗೆ ಕಳಪೆ ಆಹಾರ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಈ ಬಗ್ಗೆ ತಕ್ಷಣವೇ ಎಸಿಬಿ ಮೂಲಕ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಮಕೂರು ಸೇರಿದಂತೆ ಅಕ್ರಮ ನಡೆದಿರುವ ಜಿಲ್ಲೆಗಳಲ್ಲಿನ ಅಧಿಕಾರಿಗಳನ್ನು ಅಮಾನತು ಮಾಡಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು ತನಿಖೆ ನಡೆಸಲಾಗು ವುದು. ಈ ಎಲ್ಲ ಪ್ರಕರಣಗಳನ್ನು ಎಸಿಬಿಯಿಂದ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆಗೂ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಎಲ್ಲ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ಮಕ್ಕಳ ಹಾಸ್ಟೆಲ್‌ ಗಳಲ್ಲಿ ಪಾರದರ್ಶಕತೆ ಪಾಲಿಸುವಂತೆ ಮತ್ತು ಯಾವುದೇ ವಂಚನೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಕ್ರಮ ಗೋಸಾಗಾಟ ವಿರುದ್ಧ ಕ್ರಮ

ನಮ್ಮ ಸರಕಾರ ಅಧಿಕಾರ ಬಂದಾಗ ಗೋರಕ್ಷಣೆ ಮಾಡುವುದಕ್ಕಾಗಿ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಸದ್ಯ ಈ ಕಾಯ್ದೆ ಊರ್ಜಿತದಲ್ಲಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಗೋಸಾಗಾಟ ತಡೆಗಟ್ಟುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಮ್ಮ ಸರಕಾರ ಅಧಿಕಾರದಲ್ಲಿದ್ದರೂ, ಗೋಹತ್ಯಾ ನಿಷೇಧ ಕಾಯ್ದೆ ಜಾರಿ ಯಲ್ಲಿದ್ದರೂ ಕೆಟ್ಟ ಶಕ್ತಿಗಳು ಅಕ್ರಮ ಗೋ ಮಾರಾಟ ದಲ್ಲಿ ತೊಡಗಿದೆ. ಅದೇ ರೀತಿ ಕಾನೂನಿಗೆ ಸವಾಲ್ ಒಡ್ಡುವುದು, ಎದುರು ಬಂದವರಿಗೆ ಹಲ್ಲೆ, ಕೊಲೆಯತ್ನ ನಡೆಸುವ ಕೃತ್ಯಗಳು ನಡೆಯುತ್ತಿವೆ. ಯಾವುದಕ್ಕೂ ಬಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಗೃಹಸಚಿವರು ನೀಡಿದ್ದಾರೆ ಎಂದರು.

ತೀರ್ಥಹಳ್ಳಿ ಪ್ರಕರಣದ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸುತ್ತೇವೆ. ಗೋವಿನ ಹೆಸರಲ್ಲಿ ಕಾನೂನು ಕೈಗೆ ತೆಗೆದು ಕೊಳ್ಳುವುದನ್ನು ಸಹಿಸುವುದಿಲ್ಲ. ತೀರ್ಥಹಳ್ಳಿಯಲ್ಲಿ ನಡೆದ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ. ಇದು ನಮ್ಮ ಮುಂದಿರುವ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಗೆಲುವಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಬಹಳಷ್ಟು ಅಂತರದಲ್ಲಿ ವಿಜಯ ಸಾಧಿಸುತ್ತೇವೆ. ಒಂದೇ ಅಭ್ಯರ್ಥಿ ಒಂದೇ ಮತ ಎಂಬುದಾಗಿ ಬಿಜೆಪಿಯ ಎರಡು ಜಿಲ್ಲೆಯ ಅಧ್ಯಕ್ಷರು ಸ್ಪಷ್ಟವಾದ ಆದೇಶ ನೀಡಿ ದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತ ಮಾತ್ರ ಹಾಕಬೇಕು, ಎರಡನೇ ಪ್ರಾಶಸ್ತ್ಯ ಮತ ಯಾವುದೇ ಕಾರಣಕ್ಕೂ ಹಾಕಬಾರದು ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಿದ್ದಾರೆ ಎಂದು ಸಚಿವರು ಹೇಳಿದರು.

ಮೊಟ್ಟೆ ಯೋಜನೆ ಮುಂದುವರಿಕೆ

ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರದಲ್ಲಿ ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಮೊಟ್ಟೆ ನೀಡುವ ಯೋಜನೆ ಮುಂದು ವರಿಯಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಕೊರಗರು ನಿವೇಶನ ಸಿಗದೆ ಅಲೆದಾಡುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೊರಗರಿಗೆ ಆಗಿರುವ ಅನ್ಯಾಯದ ಬಗ್ಗೆ ಜಿಲ್ಲಾಧಿಕಾರಿ ಚರ್ಚೆ ಮಾಡಿ ನ್ಯಾಯ ಕೊಡುವ ಪ್ರಯತ್ನವನ್ನು ಸರಕಾರ ಮಾಡುತ್ತದೆ. ರಾಜ್ಯದಲ್ಲಿರುವ ಎಲ್ಲ ಭೂರಹಿತರ ಬಗ್ಗೆ ಸರ್ವೆ ಮಾಡುತ್ತಿದ್ದೇವೆ. ಕೆಲವರು ಖಾಸಗಿ ಜಾಗದಲ್ಲಿ ಮನೆ ಕಟ್ಟಿ ಸ್ವಂತ ಜಾಗ ಇಲ್ಲದವರು ಇದ್ದಾರೆ. ಈ ಕುರಿತು ಸರ್ವೆ ಮಾಡಿ ಅವರ ಖಾಸಗಿ ಜಾಗಕ್ಕೆ ಭೂ ಮೌಲ್ಯವನ್ನು ಕೊಟ್ಟು ಅವರಿಗೆ ಮನೆ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News