ಕುಂದಾಪುರ: ಬೇಡಿಕೆ ಈಡೇರಿಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರಿಂದ ಧರಣಿ

Update: 2021-12-02 12:53 GMT

ಕುಂದಾಪುರ, ಡಿ. 2: ನಿರಂತರ ಏರಿಕೆಯಾಗುತ್ತಿರುವ ಸಿಮೆಂಟ್, ಕಬ್ಬಿಣ ಮೊದಲಾದ ಕಟ್ಟಡ ಸಾಮಾಗ್ರಿಗಳ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು ಹಾಗೂ ಕಟ್ಟಡ ಸಾಮಗ್ರಿಗಳ ಮೇಲೆ ವಿಧಿಸಲಾಗುತ್ತಿರುವ ಜಿಎಸ್‌ಟಿ ಕಡಿತ ಗೊಳಿಸಬೇಕೆಂದು ಒತ್ತಾಯಿಸಿ ಕನ್‌ಸ್ಟ್ರಕ್ಷನ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾದ ಕರೆಯಂತೆ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ನೇತೃತ್ವದಲ್ಲಿ ಕುಂದಾಪುರ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು ಗುರುವಾರ ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಲಾಕ್‌ಡೌನ್ ಅವಧಿಯಲ್ಲಿ ಪರಿಹಾರ ಹಣ 3000ರೂ. ಎಲ್ಲಾ ಕಾರ್ಮಿಕರ ಖಾತೆಗೆ ಜಮೆ ಮಾಡಲು ಕಲ್ಯಾಣ ಮಂಡಳಿ ಸಂಪೂರ್ಣ ವಿಫಲವಾಗಿದೆ. ಕರೋನ ಲಾಕ್‌ಡೌನ್ ಸಂದರ್ಭದಲ್ಲಿ ಸಲ್ಲಿಸಿದ ಅರ್ಜಿಗಳನ್ನು ನವೀಕರಿಸಿಲ್ಲ ಎಂಬ ನೆಪವೊಡ್ಡಿ ಮದುವೆ, ಶೈಕ್ಷಣಿಕ ಅರ್ಜಿಗಳನ್ನು ತಿರಸ್ಕರಿಸಿ ಅಮಾನವೀಯತೆ ತೋರಿದೆ. ಕಟ್ಟಡ ಕಾರ್ಮಿಕರ ಬಹುತೇಕ ಮಕ್ಕಳಿಗೆ ಕಳೆದ ಒಂದು ವರ್ಷದಿಂದ ಬಹುತೇಕ ಶೈಕ್ಷಣಿಕ ಅರ್ಜಿಗಳನ್ನು ಮಂಜೂರು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಡಿಕೆಗಳು: ಕಟ್ಟಡ ಕಾರ್ಮಿಕರಿಗೆ ಮನೆಕಟ್ಟುವ ಸಹಾಯ 5 ಲಕ್ಷ ನೀಡಬೇಕು. ಕಟ್ಟಡ ಕಾರ್ಮಿಕರ ಪತ್ನಿಗೂ ಹೆರಿಗೆ ಭತ್ಯೆ ನೀಡಬೇಕು. ವೈದ್ಯಕೀಯ ಸಹಾಯಧನ 5 ಲಕ್ಷ ಹೆಚ್ಚಿಸಬೇಕು. ಭೋಗಸ್ ಕಾರ್ಡುಗಳನ್ನು ತಡೆಗಟ್ಟಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಕಾರ್ಮಿಕ ಇಲಾಖೆಗಳಲ್ಲಿ ಕಟ್ಟಡ ಕಾರ್ಮಿಕರ ಕೆಲಸ ಮಾಡಲು ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು. ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ವಯೋವ್ರದ್ದರ ಅಲೆದಾಟ ತಪ್ಪಿಸಬೇಕು. 2019-20 ರಲ್ಲಿ ಆಧಾರ್ ಲಿಂಕ್ ಸಮಸ್ಯೆ, ಸೈಟ್ ಬಂದ್ ಸಮಸ್ಯೆ, ಕರೋನ ಸಮಸ್ಯೆಯಿಂದ ತಡವಾಗಿ ನವೀಕರಿಸಿ ಸಲ್ಲಿಕೆಯಾದ ಸೌಲಭ್ಯದ ಅರ್ಜಿಗಳನ್ನು ಪುರಸ್ಕರಿಸಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಲಾಯಿತು.

ಮನವಿಯನ್ನು ಕಾರ್ಮಿಕ ನಿರೀಕ್ಷಕ ಪ್ರಸನ್ನ ಮೂಲಕ ಕಲ್ಯಾಣ ಮಂಡಳಿಗೆ ಹಾಗೂ ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ, ಸಂತೋಷ ಹೆಮ್ಮಾಡಿ, ಅರುಣ್ ಕುಮಾರ್ ಗಂಗೊಳ್ಳಿ, ಜಗದೀಶ ಆಚಾರ್ ಹೆಮ್ಮಾಡಿ, ಅಲೆಕ್ಸ್ ಪಿ.ಟಿ., ರಘುರಾಮ ಆಚಾರ್, ಗಣೇಶ ಆಚಾರ್, ಶಶಿಕಾಂತ್, ಸುಧೀರ್, ಶಂಕರ್ ಆಚಾರ್, ಸುಶೀಲ ಪೂಜಾರ್ತಿ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News