ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣ; ಇಬ್ಬರ ಸಾವಿಗೆ ಕಾರಣರಾದ ಇಬ್ಬರು ಚಾಲಕರಿಗೆ ಶಿಕ್ಷೆ

Update: 2021-12-02 13:16 GMT

ಮಂಗಳೂರು : ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣರಾದ ತೆಂಕ ಎಡಪದವಿನ ತಿಮ್ಮಪ್ಪ ದೇವಾಡಿಗ ಮತ್ತು ಹರ್ಯಾಣದ ಅಮೀನ್ ಎಂಬವರಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ. ಶಿಕ್ಷೆಗೊಳಗಾದ ಇಬ್ಬರು ಕೂಡ ಚಾಲಕರಾಗಿದ್ದಾರೆ.

2014ರ ಮೇ 4ರಂದು ಗುರುಪುರ ಮೂಳೂರು ಗ್ರಾಮದ ಆಣಿ ಎಂಬಲ್ಲಿ ನಡೆದಿದ್ದ ಅಪಘಾತದಲ್ಲಿ ಬಾಲಕ ಅವಿನೆಲ್ ಪಾಸ್(4) ಮೃತಪಟ್ಟಿದ್ದ. ಅಂದು ಮಧ್ಯಾಹ್ನ 1:15ರ ವೇಳೆಗೆ ಬೆಳ್ತಂಗಡಿ ಸಮೀಪದ ಬಡಕೋಡಿಯ ರೊನಾಲ್ಡ್ ಡಿಕೋಸ್ತಾ ತನ್ನ ತಂಗಿ ಹಾಗೂ ಮತ್ತೋರ್ವ ತಂಗಿಯ ಮಗನಾದ ಅವಿನೆಲ್ ಪಾಸ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಮೂಡುಬಿದಿರೆ-ಮಂಗಳೂರು ರಸ್ತೆಯಲ್ಲಿ ಕೈಕಂಬ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದರು. ಈ ವೇಳೆ ಮಂಗಳೂರಿನಿಂದ ಕೈಕಂಬ ಕಡೆಗೆ ಟೆಂಪೋ ಟ್ರಾಕ್ಸ್‌ನ್ನು ಅದರ ಚಾಲಕ ತಿಮ್ಮಪ್ಪ ದೇವಾಡಿಗ ನಿರ್ಲಕ್ಷತನದಿಂದ ಚಲಾಯಿಸಿಕೊಂಡ ಪರಿಣಾಮ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿತ್ತು. ಇದರಿಂದ ಅವಿನೆಲ್ ಗಂಭೀರವಾಗಿ ಗಾಯಗೊಂಡಿದ್ದರೆ, ರೊನಾಲ್ಡ್ ಡಿಕೋಸ್ತರಿಗೂ ಗಾಯವಾಗಿತ್ತು. ಅವಿನೇಲ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದ.

ಆರೋಪಿ ಚಾಲಕ ತಿಮ್ಮಪ್ಪ ದೇವಾಡಿಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದೆ, ಪೊಲೀಸರಿಗೆ ಮಾಹಿತಿಯನ್ನೂ ನೀಡದೆ ಪರಾರಿಯಾಗಿದ್ದ. ಈ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ಸ್‌ಪೆಕ್ಟರ್ ನರಸಿಂಹ ಮೂರ್ತಿ ಪಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ 10 ಸಾಕ್ಷಿದಾರರು ಮತ್ತು 13 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅಂಜಲಿ ಶರ್ಮಾ ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

304 ಎ ಸೆಕ್ಷನ್‌ನಡಿ 6 ತಿಂಗಳು ಸಾದಾ ಸಜೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳು ಸಾದಾ ಸಜೆ, ಸೆಕ್ಷನ್ 338ರಡಿ 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 10 ದಿನ ಸಾದಾ ಸಜೆ, ಸೆಕ್ಷನ್ 279ರಡಿ 1,000 ರೂ. ದಂಡ; ದಂಡ ಪಾವತಿಸಲು ತಪ್ಪಿದರೆ 10 ದಿನ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಗೀತಾ ರೈ ವಾದಿಸಿದ್ದಾರೆ.

2018ರ ಮೇ 18ರಂದು ಕೊಟ್ಟಾರ ಚೌಕಿ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರನ ಸಾವಿಗೆ ಕಾರಣನಾದ ಟ್ಯಾಂಕರ್ ಚಾಲಕ ಅಮೀನ್‌ಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಅಂದು ಬೆಳಗ್ಗೆ 8:45ರ ವೇಳೆಗೆ ಮಹೇಶ್ ಭಟ್ (35) ತನ್ನ ಬೈಕ್‌ನಲ್ಲಿ ನಂತೂರಿನಿಂದ ಕೂಳೂರು ಕಡೆಗೆ ಹೋಗುತ್ತಿದ್ದರು. ಕೊಟ್ಟಾರ ಚೌಕಿ ಬಳಿ ಟ್ಯಾಂಕರ್‌ನ್ನು ಅದರ ಚಾಲಕ ಹರ್ಯಾಣದ ಅಮೀನ್ ಎಂಬಾತ ನಿರ್ಲಕ್ಷತನದಿಂದ ಚಲಾಸುತ್ತಲೇ ಓವರ್‌ಟೇಕ್ ಮಾಡುವ ಭರಾಟೆಯಲ್ಲಿ ಟ್ಯಾಂಕರ್ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಇದರಿಂದ ಮಹೇಶ್ ಭಟ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು.

ಟ್ಯಾಂಕರ್ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ ಎ. ಮತ್ತು ಸಿ. ತಿಮ್ಮರಾಜು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯವು 9 ಸಾಕ್ಷಿಗಳ ವಿಚಾರಣೆ ನಡೆಸಿ 20 ದಾಖಲೆಗಳನ್ನು ಪರಿಗಣಿಸಿ ಆರೋಪಿಗೆ ಶಿಕ್ಷೆ ವಿಧಿಸಿದೆ. 304(ಎ) ಸೆಕ್ಷನ್‌ನಡಿ 6 ತಿಂಗಳು ಸಾದಾ ಶಿಕ್ಷೆ ಹಾಗೂ 5,000 ರೂ. ದಂಡ; ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಾದಾ ಸಜೆ, 134 ಎ ಮತ್ತು ಬಿ ಸೆಕ್ಷನ್‌ಗಳಡಿ 500 ರೂ. ದಂಡ; ದಂಡ ಪಾವತಿಸಲು ತಪ್ಪಿದರೆ 10 ದಿನ ಸಾದಾ ಸಜೆ ವಿಧಿಸಿ ಮಂಗಳೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅಶ್ವಿನಿ ಕೋರೆ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ನೇತ್ರಾವತಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News