ಡಿ.5ರಂದು ‘ನಮ್ಮೂರ ಆಟ ಕೂಟ ಟ್ರಸ್ಟ್ ’ಉದ್ಘಾಟನೆ

Update: 2021-12-02 13:19 GMT

ಮಂಗಳೂರು, ಡಿ.2: ಯಕ್ಷಗಾನ ಸಹಿತ ತುಳು, ಕನ್ನಡ ಭಾಷೆ, ಸಂಸ್ಕೃತಿ ಅಭಿವೃದ್ಧಿಗೆ ಬೆಂಬಲ ನೀಡುವ ಉದ್ದೇಶದಿಂದ ‘ನಮ್ಮೂರ ಆಟ ಕೂಟ ಟ್ರಸ್ಟ್’ ಆರಂಭವಾಗಿದ್ದು, ಇದರ ಉದ್ಘಾಟನಾ ಸಮಾರಂಭ ಮತ್ತು ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ ಡಿ.5ರಂದು ಸಂಜೆ 3 ಗಂಟೆಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಮುಲ್ಕಿ ಕರುಣಾಕರ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು, ಆಸಕ್ತರಿಗೆ ಯಕ್ಷಗಾನ ಹಿಮ್ಮೇಳ, ಮುಮ್ಮೇಳ ತರಬೇತಿ, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವುದು ಆರ್ಥಿಕ ಸಮಸ್ಯೆಯಿಂದ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಆರ್ಥಿಕ ಪ್ರೋತ್ಸಾಹ, ಪ್ರತಿಭಾ ಪುರಸ್ಕಾರ ನೀಡುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ವರ್ಷಂಪ್ರತಿ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡುವುದು, ಇತ್ಯಾದಿ ಉದ್ದೇಶಗಳನ್ನು ಇಟ್ಟುಕೊಂಡು ಟ್ರಸ್ಟ್ ಸ್ಥಾಪಿಸಲಾಗಿದೆ ಎಂದರು.

ಡಿ.5ರಂದು ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಣ, ಕ್ರೀಡಾ ಉದ್ಯಮ ಕ್ಷೇತ್ರದ ಸಾಧನೆಗಾಗಿ ಎ.ಸದಾನಂದ ಶೆಟ್ಟಿ, ಸಾಮಾಜಿಕ ಜಾಗೃತಿಗಾಗಿ ಹನುಮಂತ ಕಾಮತ್, ವಿದೇಶದಲ್ಲಿ ತುಳು ಕನ್ನಡ ಸಂಘಟನೆಗಾಗಿ ಸರ್ವೋತ್ತಮ ಬಿ. ಶೆಟ್ಟಿ ಅಬುಧಾಬಿ, ಸಾಂಸ್ಕೃತಿಕ-ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಕದ್ರಿ ನವನೀತ್ ಶೆಟ್ಟಿ, ಯಕ್ಷಗಾನ ಕ್ಷೇತ್ರದಲ್ಲಿ ಪಟ್ಲ ಸತೀಶ್ ಶೆಟ್ಟಿ, ಬ್ಯಾಂಕಿಂಗ್ ಕ್ಷೇತ್ರದ ಸಾಧನೆಗೆ ವಿಠಲ್ ಡಿ. ಶೆಟ್ಟಿ ಅವರಿಗೆ ‘ಮೂಲ್ಕಿ ಸುಂದರರಾಮ ಶೆಟ್ಟಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿ.ವಿ. ಕುಲಾಧಿಪತಿ ಡಾ.ಎನ್.ವಿನಯ ಹೆಗ್ಡೆ ವಹಿಸಲಿದ್ದಾರೆ.

ಈ ವೇಳೆ ಮಂಗಳೂರಿನ ಬ್ಯಾಂಕ್ ಆಫ್ ಬರೋಡದ ಮಹಾಪ್ರಬಂಧಕ ಹಾಗೂ ವಲಯ ಮುಖ್ಯಸ್ಥೆ ಗಾಯತ್ರಿ ಆರ್.ಲಾಂಛನ ಬಿಡುಗಡೆ ಮಾಡಲಿದ್ದಾರೆ. ಉದ್ಯಮಿ ಅಶೋಕ್ ಕುಮಾರ್ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದಾರೆ. ಈ ವೇಳೆ ಶಾಸಕ ಡಾ.ಭರತ್ ಶೆಟ್ಟಿ ವೈ., ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ಕರುಣಾಕರ ಶೆಟ್ಟಿ ತಿಳಿಸಿದರು.

ಕದ್ರಿ ನವನೀತ ಶೆಟ್ಟಿ ವಿರಚಿತ ಕುಳಾಯಿ ಮಾಧವ ಭಂಡಾರಿ ಪದ್ಯ ರಚನೆಯ ‘ಶ್ರೀದೇವಿ ಮಾರಿಯಮ್ಮ’ ತುಳು ಜಾನಪದ ಯಕ್ಷಗಾನ ಪ್ರಥಮ ಪ್ರಯೋಗವು ಅಂದು ಸಂಜೆ 3 ಗಂಟೆಯಿಂದ ಬಪ್ಪನಾಡು ಮೇಳದವರಿಂದ ನಡೆಯಲಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಮಹಾಪೋಷಕರಾದ ರಾಜಗೋಪಾಲ್ ರೈ, ದೇವಿಚರಣ್ ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ್, ಸಂಜೀವ ದೇವಾಡಿಗ ಮುಲ್ಕಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News