ಅಡ್ಡೂರು: ಚಿನ್ನಾಭರಣ ಕಳವು ಆರೋಪಿ ಸೆರೆ

Update: 2021-12-02 14:39 GMT

ಮಂಗಳೂರು, ಡಿ.2: ಅಡ್ಡೂರು ಗ್ರಾಮದ ಪಲ್ಲಂಗಡಿಯ ಅಹ್ಮದ್ ಬಾವಾ ಎಂಬವರ ಮನೆಯಿಂದ ಕಳೆದ ವರ್ಷದ ಮೇ ತಿಂಗಳಲ್ಲಿ ಚಿನ್ನಾಭರಣ ಕಳವುಗೈದಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅಬ್ಬಾಸ್ ಯಾನೆ ಟಿ. ಅಬ್ಬಾಸ್ ಯಾನೆ ಮಿಯಪದವು ಅಬ್ಬಾಸ್ ಯಾನೆ ನಝೀರ್ ಯಾನೆ ಇಬ್ರಾಹೀಂ ಎಂದು ಗುರುತಿಸಲಾಗಿದೆ.

ಆರೋಪಿಯು ಅಹ್ಮದ್ ಬಾವಾರ ಮನೆಯ ಮುಂಭಾಗದ ಕಿಟಕಿಯ ಸರಳನ್ನು ಮುರಿದು ಒಳನುಗ್ಗಿ ಕಬೋರ್ಡ್‌ನಲ್ಲಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಬೆಳ್ತಂಗಡಿ, ಕಡಬ, ರಾಮಕುಂಜ, ಪುತ್ತೂರು, ಉಳ್ಳಾಲ, ಕುಂಬ್ಳೆ, ಮಂಜೇಶ್ವರ ಮತ್ತಿತರ ಕಡೆಗಳಲ್ಲಿ ಕಳೆದ ಒಂದುವರೆ ವರ್ಷದಿಂದ ಹೆಸರು ಬದಲಿಸಿಕೊಂಡು ಪೊಲೀಸರಿಂದ ತಲೆಮರೆಸಿಕೊಂಡು ಸುತ್ತಾಡುತ್ತಿದ್ದ. ಈತನ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ಬಜ್ಪೆ ಪೊಲೀಸರು ಗುರುವಾರ ಬೆಳಗ್ಗೆ 10:30ಕ್ಕೆ ಬಂಧಿಸಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಅಬ್ಬಾಸ್ ವಿರುದ್ದ ಕೊಣಾಜೆ, ಉಳ್ಳಾಲ, ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ಬೆಳ್ತಂಗಡಿ ಅರಣ್ಯ ದಳ ಹಾಗೂ ಕುಂಬ್ಳೆ ಮತ್ತು ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಿ ಮನೆಯೊಳಗೆ ನುಗ್ಗಿ ಕಳವು, ಗ್ಯಾಸ್ ಸಿಲಿಂಡರ್ ಕಳವು, ಬೈಕ್ ಕಳ್ಳತನ ಹಾಗೂ ಅಮೂಲ್ಯವಾದ ಬೀಟೆ ಮರ ಕಳ್ಳತನ ಸಂಬಂಧಿಸಿದಂತೆ ಸುಮಾರು 20ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುಪುರ ಸಮೀಪದ ಗಂಜಿಮಠದ ಜಸಿಂತಾ ಎಂಬವರ ಡಿಕುನ್ನ ಕಾಂಪ್ಲಕ್ಸ್ ನಲ್ಲಿ ಮೊಬೈಲ್ ಕಳವಿಗೂ ಯತ್ನಿಸಿರುವ ಬಗ್ಗೆ ವಿಚಾಣೆ ವೇಳೆ ಬಾಯಿಬಿಟ್ಟಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಶಶಿ ಕುಮಾರ್‌ರ ಮಾರ್ಗದರ್ಶನ, ಡಿಸಿಪಿಗಳಾದ ಹರಿರಾಮ್ ಶಂಕರ್ ಮತ್ತು ದಿನೇಶ್ ಕುಮಾರ್‌ರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್‌ರ ನೇತೃತ್ವದಲ್ಲಿ ಬಜ್ಪೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.,ಎಸ್ಸೈ ಪೂವಪ್ಪ, ರಾಘವೇಂದ್ರ ನಾಯ್ಕ್, ಕಮಲಾ, ಪ್ರೊಭೆಷನರಿ ಎಸ್ಸೈ ಅರುಣ್‌ ಕುಮಾರ್, ರಾಮ ಪೂಜಾರಿ ಮೇರೆಮಜಲು, ಸಂತೋಷ ಡಿ.ಕೆ ಸುಳ್ಯ, ರಶೀದ್ ಶೇಖ್, ಸುಜನ್, ಕಮಲಾಕ್ಷ, ರಾಜೇಶ್, ಹೊನ್ನಪ್ಪ ಗೌಡ, ಸಿದ್ದಲಿಂಗಯ್ಯ ಹಿರೇಮಠ್, ಸಂಜೀವ, ಮುತ್ತಣ್ಣ, ಎಫ್‌ಬಿಯು ವಿಭಾಗದ ಪ್ರಕಾಶ್, ಕಂಪ್ಯೂಟರ್ ವಿಭಾಗದ ಮನೋಜ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News