ಉಡುಪಿ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ; ನಗರಸಭೆಯಿಂದ ಕಟ್ಟುನಿಟ್ಟಿನ ಕ್ರಮ

Update: 2021-12-02 15:12 GMT

ಉಡುಪಿ, ಡಿ.2: ಪಾದಾಚಾರಿ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಉಡುಪಿ ನಗರಸಭೆಯ ಅಧಿಕಾರಿಗಳ ತಂಡ ನಗರದ ಸರ್ವಿಸ್ ಹಾಗೂ ಸಿಟಿ ಬಸ್ ನಿಲ್ದಾಣಗಳ ಸುತ್ತಮುತ್ತ ಬೀದಿ ಬದಿ ವ್ಯಾಪಾರ ಹಾಗೂ ಫುಟ್‌ಪಾತ್‌ಗಳನ್ನು ಅಕ್ರಮಿಸಿರುವ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಗುರುವಾರ ನಡೆಸಿತು.

ಉಡುಪಿ ಸರ್ವಿಸ್ ಬಸ್ ನಿಲ್ದಾಣ ಹಾಗೂ ಸಿಟಿ ಬಸ್ ನಿಲ್ದಾಣದ ಸುತ್ತ ಮುತ್ತಲಿನ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಚಪ್ಪಲಿ, ಬಟ್ಟೆ, ಹೂವು, ಹಣ್ಣು, ತಿಂಡಿ ಸಹಿತ ವಿವಿಧ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸಲಾಯಿತು. ಅದೇ ರೀತಿ ಫುಟ್‌ಪಾತ್‌ನಲ್ಲಿ ಅಂಗಡಿ ಸಾಮಾನುಗಳನ್ನು ಇರಿಸಿ ವ್ಯಾಪಾರ ಮಾಡುತ್ತಿರುವವರ ವಿರುದ್ಧವೂ ಕ್ರಮ ಜರಗಿಸಲಾಯಿತು.

ತೆರವುಗೊಳಿಸಲು ಒಪ್ಪದ ಬೀದಿ ಬದಿ ವ್ಯಾಪಾರಿಗಳ ಸೊತ್ತುಗಳನ್ನು ನಗರಸಭೆ ಸಿಬ್ಬಂದಿಗಳೇ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡರು. ಪ್ಲಾಸ್ಟಿಕ್ ಚೀಲಗಳನ್ನು ಬಳಕೆ ಮಾಡುತ್ತಿದ್ದ ಹಲವು ಅಂಗಡಿಗಳಿಗೆ ಸ್ಥಳದಲ್ಲಿಯೇ ದಂಡ ವಿಧಿಸ ಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ, ಅಧಿಕಾರಿಗಳಾದ ಧನಂಜಯ್, ಕರುಣಾಕರ್, ಸಂಚಾರ ಪೊಲೀಸ್ ಠಾಣೆಯ ಎಸ್ಸೈ ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಾಚರಣೆ ಮುಂದುವರಿಕೆ: ಈ ಕುರಿತು ಮಾತನಾಡಿದ ಪೌರಾಯುಕ್ತ ಡಾ.ಉದಯ ಶೆಟ್ಟಿ, ನಗರದಲ್ಲಿ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಹೆಚ್ಚಿನ ಅಂಗಡಿಯವರು ತಮ್ಮ ಸೊತ್ತುಗಳನ್ನು ಫುಟ್‌ಪಾತ್‌ಗಳಲ್ಲೇ ಇರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಪಾದಾಚಾರಿ ಗಳು ಫುಟ್‌ಪಾತ್ ಇಲ್ಲದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ ರಸ್ತೆಯಲ್ಲೇ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದಾರೆ. ಇದರ ಪರಿಣಾಮ ನಗರದ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಹೇಳಿದರು.

ಈ ಸಂಬಂಧ ಈಗಾಗಲೇ ಎಲ್ಲರಿಗೂ ಎಚ್ಚರಿಕೆ ನೀಡಿ ಬಂದಿದ್ದೇವೆ. ಆದರೂ ವ್ಯಾಪಾರ ಮುಂದುವರೆಸಿರುವ ಹಿನ್ನೆಲೆಯಲ್ಲಿ ನಾವೇ ರಸ್ತೆಗೆ ಇಳಿದು ಕಾರ್ಯಾ ಚರಣೆ ನಡೆಸಿದ್ದೇವೆ. ಈ ಕಾರ್ಯಾಚರಣೆ ನಿರಂತರವಾಗಿ ಮುಂದುವರೆಯ ಲಿದೆ. ಈ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.

ಅಂಗಡಿಯವರೇ ತಮ್ಮ ಅಂಗಡಿಗಳ ಎದುರು ನೋ ಪಾರ್ಕಿಂಗ್ ಬೋರ್ಡ್ ಹಾಕಲು ಅವಕಾಶ ಇಲ್ಲ. ಆ ರೀತಿ ಮಾಡಿದವರ ಲೈಸನ್ಸ್ ರದ್ದು ಮಾಡಲು ಕ್ರಮ ತೆಗೆದು ಕೊಳ್ಳಲಾಗುವುದು. ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್ ಸ್ಥಳದಲ್ಲಿ ತೆರಯಲಾಗಿರುವ ಅಂಗಡಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಮಾಡುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News