ಉಡುಪಿ; ಹೊಂಡ ಗುಂಡಿಯ ರಸ್ತೆ: ಆ್ಯಂಬುಲೆನ್ಸ್ ನಲ್ಲಿಯೇ ಹೆರಿಗೆ !

Update: 2021-12-02 15:15 GMT

ಉಡುಪಿ, ಡಿ.2: ಹೊಂಡ ಗುಂಡಿಯಿಂದ ಕೂಡಿರುವ ಉಡುಪಿ ನಗರಸಭೆ ವ್ಯಾಪ್ತಿಯ ಗುಂಡಿಬೈಲಿನಿಂದ ಅಡ್ಕದಕಟ್ಟೆ ಸಂಪರ್ಕಿಸುವ ರಸ್ತೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಗುರುವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು.

ಮೃತ್ಯು ಕೂಪದಂತಿರುವ ಹೊಂಡ ಗುಂಡಿಗಳಿರುವ ರಸ್ತೆಯಲ್ಲಿ ಸೈರನ್ ಮೊಳಗಿಸುತ್ತ ವಾಲಿಕೊಂಡು ಆ್ಯಂಬುಲೆನ್ಸ್ ಸಾಗುತ್ತಿತ್ತು. ರಸ್ತೆ ಉದ್ದಕ್ಕೂ ನಿಂತು ಜನ ನೋಡುತ್ತಿದ್ದಂತೆಯೇ ಆ್ಯಂಬುಲೆನ್ಸ್ ನಡು ರಸ್ತೆಯಲ್ಲಿ ನಿಂತಿತು. ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆಯನ್ನು ಆ್ಯಂಬುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಸಂಪೂರ್ಣ ಹದಗೆಟ್ಟ ರಸ್ತೆಯಿಂದಾಗಿ ಗರ್ಭಿಣಿ ಆ್ಯಂಬುಲೆನ್ಸ್ ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದರು.

ಇದು ಹದಗೆಟ್ಟಿರುವ ರಸ್ತೆಯ ಪರಿಸ್ಥಿತಿಯ ಬಗ್ಗೆ ಆಡಳಿತ ವ್ಯವಸ್ಥೆಗಳ ಗಮನ ಸೆಳೆಯಲು ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ತಾಯಿ ಮಗುವಿನ ಗೊಂಬೆಗಳನ್ನು ಬಳಸಿಕೊಂಡು ಮಾಡಿರುವ ಅಣುಕು ಪ್ರದರ್ಶನವಾಗಿತ್ತು.

ಇಲ್ಲಿಯ ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲಾಗದ ಅಯ್ಯೋಮಯ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಗೆ ರೋಗಿಗಳು ಸಾಗಿಸುವುದು ಸವಾಲಿನ ಕೆಲಸವಾಗಿದೆ. ಶಾಲಾ ವಿದ್ಯಾರ್ಥಿಗಳು ನಡೆದಾಡಲು ಅಸಾಧ್ಯವಾಗಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಈ ರಸ್ತೆಯನ್ನು ಕಾಂಕ್ರೀಟಿಕರಣ ಮಾಡುವಂತೆ ಸಮಾಜ ಸೇವಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News